ಮಂಗಳೂರು: ದೇಶದ ಆಳುವ ವರ್ಗಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ದುಡಿಯುವ ವರ್ಗದ ಹಕ್ಕುಗಳನ್ನು ಕಿತ್ತುಕೊಂಡು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಆದರೆ ದೇಶದ ಕಾರ್ಮಿಕ ವರ್ಗವು ಆಳುವ ವರ್ಗದ ಎಲ್ಲಾ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರಬಲ ಹೋರಾಟಗಳ ಮೂಲಕ ಹಿಮ್ಮೆಟ್ಟಿಸಿ ಕಾರ್ಮಿಕ ಕಾನೂನುಗಳನ್ನು ಕಾಪಾಡಿಕೊಂಡಿದೆ ಎಂದು CITU ರಾಷ್ಟ್ರೀಯ ನಾಯಕ ಕೆ.ಎನ್. ಉಮೇಶ್ ಹೇಳಿದರು. ಅವರು CITU ಕರ್ನಾಟಕ ರಾಜ್ಯ ಸಮಿತಿಯ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಹಾಸನ ವಿಭಾಗ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಮುಂದುವರಿದು ಅವರು, ಇಂದು ಸಾಮ್ರಾಜ್ಯಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವ ದೇಶದ ಆಳುವ ವರ್ಗಗಳು ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸುವುದಷ್ಟೇ ಅಲ್ಲದೆ ದೇಶದ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ವರ್ಗ ಪ್ರತಿರೋಧ ಹಾಗೂ ನಿರಾಕರಣೆಯ ಮೂಲಕ ಆಳುವ ವರ್ಗದ ವಿರುದ್ಧ ಸಂಘಟಿತ ಹೋರಾಟ ರೂಪುಗೊಂಡಾಗ ಮಾತ್ರ ಕಾರ್ಮಿಕ ವರ್ಗದ ವಿಮೋಚನೆ ಸಾಧ್ಯ ಎಂದು ಹೇಳಿದರು.
ನವಉದಾರವಾದದ ಬಿಕ್ಕಟ್ಟು ಜಗತ್ತಿನೆಲ್ಲೆಡೆ ತೀವ್ರಗೊಳ್ಳುತ್ತಿದೆ. ಅದರ ಪರಿಣಾಮವಾಗಿ ಯುದ್ಧದ ಭೀತಿ ಹಾಗೂ ಬೆಲೆ ಏರಿಕೆಗಳು ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಅವರು ಹೇಳಿದರು.
ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ CITU ಅಖಿಲ ಭಾರತ ಸಮ್ಮೇಳನದ ವರದಿ ಮತ್ತು ಅದರಲ್ಲಿ ಕೈಗೊಂಡ ಮಹತ್ವದ ತೀರ್ಮಾನಗಳನ್ನು ಅವರು ವಿವರಿಸಿದರು.
ಹಾಸನದಲ್ಲಿ ನಡೆದ CITU ಕರ್ನಾಟಕ ರಾಜ್ಯ ಸಮ್ಮೇಳನದ ವರದಿಯನ್ನು ವಿವರಿಸಿದ CITU ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ರಾಜ್ಯದ ಸಿದ್ದರಾಮಯ್ಯ ಸರ್ಕಾರವೂ ಸಾಲದ ಭಾರದಿಂದ ‘ಸಾಲರಾಮಯ್ಯ ಸರ್ಕಾರ’ವಾಗಿ ಪರಿವರ್ತನೆಗೊಂಡಿದ್ದು, ಕಾರ್ಮಿಕ ಸಂಹಿತೆಗಳ ಜಾರಿಗೆ ಕಠಿಣ ನಿಯಮಾವಳಿಗಳನ್ನು ರೂಪಿಸಿ ಕಾರ್ಮಿಕ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು CITU ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್ ವಹಿಸಿದ್ದರು. ವೇದಿಕೆಯಲ್ಲಿ CITU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, CITU ರಾಜ್ಯ ನಾಯಕರುಗಳಾದ ಸುರೇಶ್ ಕಲ್ಲಾಗಾರ ಮತ್ತು ಚಂದ್ರಶೇಖರ ವಿ. ಕುಂದಾಪುರ ಉಪಸ್ಥಿತರಿದ್ದರು.