ಮಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ಶೀಘ್ರದಲ್ಲೇ ಎರಡನೇ ಅಧಿಕೃತ ಭಾಷೆಯ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಶುಕ್ರವಾರ ನಡೆದ ತುಳು ವಿದ್ಯಾರ್ಥಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೋಹನ ಆಳ್ವ ನೇತೃತ್ವದ ಸಮಿತಿ ಹಾಗೂ ತಾರಾನಾಥ ಗಟ್ಟಿ ನೇತೃತ್ವದ ಸಮಿತಿಗಳು ಈಗಾಗಲೇ ತಮ್ಮ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಹೇಳಿದರು. ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳು ಇರುವುದನ್ನು ಉಲ್ಲೇಖಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ರಾಜ್ಯಭಾಷೆ ಹೊರತುಪಡಿಸಿ ಇನ್ನೂ ಐದು ಅಧಿಕೃತ ಭಾಷೆಗಳು ಇರುವುದಾಗಿ ಹೇಳಿದರು.
ಅಧಿಕೃತ ಮಾನ್ಯತೆ ದೊರೆತರೂ ಭಾಷೆಯನ್ನು ಬಳಸದಿದ್ದರೆ ಅದು ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಯುವಜನತೆ ಸ್ಥಳೀಯ ಭಾಷೆಗಳ ಬಳಕೆಗೆ ಮುಂದಾಗಬೇಕು. ಹೆಚ್ಚು ಬಳಕೆಯಲ್ಲಿರುವ ಭಾಷೆಗಳು ವೇಗವಾಗಿ ಅಭಿವೃದ್ಧಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಪ್ರಾಂತ ರೈತ ಸಂಘದ ಅಧ್ಯಕ್ಷ ಯಾದವ ಶೆಟ್ಟಿ ಹಾಗೂ ರೈತ ಸಂಘದ ಮುಖಂಡ ದೇವದಾಸ್ ಉಪಸ್ಥಿತರಿದ್ದರು.