ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸುಮಾರು ಎರಡು ಕಿಲೋಮೀಟರ್ ದೂರ ಬಸ್ ಚಾಲನೆ ಮಾಡಿ ವಿಶೇಷ ಗಮನ ಸೆಳೆದರು.
ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಪ್ರಾರಂಭಿಸಲಾದ ಮಂಗಳೂರು–ಮಂತ್ರಾಲಯ ಪಲ್ಲಕ್ಕಿ ಸ್ಲೀಪರ್ ಬಸ್ ಸೇವೆಗೆ ಅವರು ಸ್ವತಃ ಚಾಲನೆ ನೀಡಿದರು.
ಕೆಎಸ್ಆರ್ಟಿಸಿ ವತಿಯಿಂದ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್ಗಳು ಮಂತ್ರಾಲಯದತ್ತ ಸಂಚಾರ ಆರಂಭಿಸಿದ್ದು, ಈ ಬಸ್ ಸುಮಾರು 12 ಗಂಟೆಗಳಲ್ಲಿ ಗಮ್ಯಸ್ಥಾನ ತಲುಪಲಿದೆ. ಇದರಿಂದ ಮಂತ್ರಾಲಯ ಮಂಗಳೂರಿನ ಪ್ರಯಾಣಿಕರಿಗೆ ಇನ್ನಷ್ಟು ಸುಲಭವಾಗಿ ತಲುಪುವಂತಾಗಿದೆ.
ಈ ಬಸ್ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಹಾಗೂ ಅದೋನಿ ಮಾರ್ಗವಾಗಿ ಸಂಚರಿಸಲಿದೆ. ಮಂಗಳೂರಿನಿಂದ ₹1500, ಉಡುಪಿಯಿಂದ ₹1450 ಹಾಗೂ ಕುಂದಾಪುರದಿಂದ ₹1400 ಪ್ರಯಾಣ ದರ ನಿಗದಿಪಡಿಸಲಾಗಿದೆ.
ನಾನ್ ಎಸಿ ಪಲ್ಲಕ್ಕಿ ಬಸ್ನಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ಹಲವು ಆಧುನಿಕ ವ್ಯವಸ್ಥೆಗಳು ಕಲ್ಪಿಸಲಾಗಿದೆ. 30 ಆಸನಗಳಿರುವ ಈ ಬಸ್ಗಳಲ್ಲಿ ಅಡ್ವಾನ್ಸ್ಡ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್, ಫ್ರಂಟ್ ಡ್ಯಾಶ್ ಕ್ಯಾಮೆರಾ, ಪಾರ್ಕಿಂಗ್ ಕ್ಯಾಮೆರಾ, ಒಳಾಂಗಣ ಸಿಸಿಟಿವಿ, ಆಸನದ ಮೇಲ್ಭಾಗದಲ್ಲಿ ಎಲ್ಇಡಿ ಲೈಟ್ಗಳು, ಪ್ಯಾನಿಕ್ ಬಟನ್, ಅಗ್ನಿ ಸುರಕ್ಷತಾ ವ್ಯವಸ್ಥೆ, ಯುಎಸ್ಬಿ ಮತ್ತು ಟೈಪ್-ಸಿ ಮೊಬೈಲ್ ಚಾರ್ಜರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.