ಟೋಕಿಯೋ, ಜುಲೈ 28: ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರಾಂತ್ಯದಲ್ಲಿ ಮಂಗಳವಾರ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಿ ಸನೇ ತಕೈಚಿ ಸ್ಪಷ್ಟಪಡಿಸಿದ್ದಾರೆ.


ಭೂಕಂಪದ ಕೇಂದ್ರಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ ಆಳದಲ್ಲಿದ್ದು, ಕರಾವಳಿ ತೀರದಲ್ಲಿ 1 ಮೀಟರ್ (3.28 ಅಡಿ) ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕರಾವಳಿ ನಿವಾಸಿಗಳಿಗೆ ಎತ್ತರದ ಪ್ರದೇಶಗಳಿಗೆ ತೆರಳಲು ಜಪಾನ್ ಹವಾಮಾನ ಸಂಸ್ಥೆ ಸೂಚಿಸಿದೆ. ಜಪಾನ್ ಸರ್ಕಾರವು ಕ್ಯುಶು ದ್ವೀಪದ ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಮತ್ತು ಮಿಯಾಜಾಕಿ ಪ್ರಾಂತ್ಯಗಳಿಗೆ ತುರ್ತು ಭೂಕಂಪದ ಎಚ್ಚರಿಕೆಯನ್ನು ನೀಡಿದೆ.


ಈ ಪ್ರಬಲ ಭೂಕಂಪನದ ನಂತರ ದೇಶದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರ ಭರವಸೆ ನೀಡಿದೆ. ಆಸ್ತಿ-ಪಾಸ್ತಿ ಹಾನಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಆದೇಶಿಸಿರುವ ಜಪಾನ್ ಪ್ರಧಾನಿ ಕಚೇರಿಯು, “ಮನುಷ್ಯರ ಜೀವ ಉಳಿಸುವುದೇ ನಮ್ಮ ಮೊದಲ ಆದ್ಯತೆ” ಎಂದು ಅಧಿಕಾರಿಗಳಿಗೆ ತುರ್ತು ಕಾರ್ಯಾಚರಣೆಗೆ ಸೂಚಿಸಿದೆ.

