(ಮೂಕ ಸಾಕ್ಷಿಯಾಗಿ ನಿಂತಿರುವ ಕಾಸರಗೋಡಿನ ಮಲ್ಲಿಕಾರ್ಜುನ ದೇವಳದ ಪರಿಸರ)
ಕಾಸರಗೋಡು ಎಂದರೆ ಅದು ಕೇವಲ ಮಲಯಾಳ ಮತ್ತು ಕನ್ನಡದ ಭಾಷಾ ಸಂಗಮದ ಭೂಮಿಯಲ್ಲ; ಅದು ಕನ್ನಡದ ಅಸ್ಮಿತೆಗಾಗಿ ಹಸಿರಕ್ತದ ಪವಿತ್ರ ತರ್ಪಣವಿತ್ತ ಪುಣ್ಯನೆಲೆ! 1956ರ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಂದರ್ಭದಲ್ಲಿ, ಶೇ. 90ಕ್ಕೂ ಹೆಚ್ಚು ಕನ್ನಡಿಗರಿದ್ದ ಈ ಮಣ್ಣನ್ನು ಕೇವಲ ಆಡಳಿತಾತ್ಮಕ ಹಿತಾಸಕ್ತಿಗಾಗಿ ಕೇರಳದ ತೆಕ್ಕೆಗೆ ತಳ್ಳಿದ್ದು ಭಾರತದ ಗಡಿ ಇತಿಹಾಸದ ಅತಿದೊಡ್ಡ ಅನ್ಯಾಯಗಳಲ್ಲೊಂದು.
ಈ ಅನ್ಯಾಯದ ವಿರುದ್ಧ ಸಿಡಿದೆದ್ದ ಕನ್ನಡಿಗರ ಹೋರಾಟಕ್ಕೆ ಏಳು ದಶಕಗಳ ಸುದೀರ್ಘ ಇತಿಹಾಸವಿದೆ. 1956ರಲ್ಲಿ ಮೈಸೂರು ರಾಜ್ಯ ಉದಯವಾದಾಗ ಬೆಳಗಾವಿ, ಬೀದರ್, ಕಲಬುರಗಿಗಳು ಕರ್ನಾಟಕದ ಭೂಪಟ ಸೇರಿದವು. ಆದರೆ, ದಕ್ಷಿಣದ ಮಣಿಮುಕುಟದಂತಿದ್ದ ಕಾಸರಗೋಡು ಮಾತ್ರ ಅನಿವಾರ್ಯವಾಗಿ ಪರರ ಪಾಲಾಯಿತು. ಈ ನೋವಿನಿಂದಲೇ ಉದಿಸಿದ್ದು ‘ಕರ್ನಾಟಕ ಏಕೀಕರಣ ಸಮಿತಿ’. ಆ ನೆನಪುಗಳೇ ಒಂದು ರೋಮಾಂಚನ!
ಆದೂರು ಚಲ್ಲಂಗೋಡಿನ ಹಿರಿಯರಾದ ಶಂಕರನಾರಾಯಣ ಭಟ್ಟರು ಅಂದು ಮಂಗಳೂರಿನ ಗಾಂಧಿ ಶಾಲೆಯಲ್ಲಿ 6ನೇ ತರಗತಿಯ ಬಾಲಕರಾಗಿದ್ದಾಗ ವರದಿಗಳಲ್ಲಿ ಕಂಡ ಆ ದೃಶ್ಯಗಳು ಇಂದಿಗೂ ಅವರ ಕಣ್ಣಮುಂದೆ ಹಸಿರಾಗಿವೆ. 1966ರ ಡಿಸೆಂಬರ್ 15—ಕಾಸರಗೋಡಿನ ಪ್ರತಿ ಬೀದಿಬೀದಿಗಳಲ್ಲಿ ಮೊಳಗುತ್ತಿದ್ದ ಏಕೈಕ ಘೋಷಣೆ: “ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕು!” ಅಂದು ಐತಿಹಾಸಿಕ ಮಲ್ಲಿಕಾರ್ಜುನ ದೇವಳದ ಪರಿಸರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಷಾ ಪ್ರೇಮದ ಕೆಚ್ಚಿನೊಂದಿಗೆ ಬೀದಿಗಿಳಿದಿದ್ದರು.
ಆ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅಂದಿನ ಪೊಲೀಸರು ನಡೆಸಿದ ಅಮಾನವೀಯ ಗುಂಡಿನ ದಾಳಿಗೆ ಹದಿನಾಲ್ಕು-ಹದಿನೈದು ಪ್ರಾಯದ ಇಬ್ಬರು ಕುಸುಮಗಳು ಬಲಿಯಾದವು. ಅವರೇ ಶಾಂತಾರಾಮ ಶೆಣೈ ಮತ್ತು ಸುಧಾಕರ ಅಗ್ಗಿತ್ತಾಯ. ಪಠ್ಯಪುಸ್ತಕಗಳನ್ನು ಹಿಡಿಯಬೇಕಿದ್ದ ಆ ಕೋಮಲ ಹಸ್ತಗಳು ಕನ್ನಡದ ಬಾವುಟ ಹಿಡಿಯುತ್ತಲೇ ರಕ್ತಸಿಕ್ತವಾದವು! ಆ ಗುಂಡಿನ ದಾಳಿಯ ತೀವ್ರತೆಗೆ ಸಾಕ್ಷಿಯಾಗಿ ದಶಕಗಳ ಕಾಲ ದೇವಳದ ಗೋಡೆಯಲ್ಲಿದ್ದ ಆ ಬಿರುಕುಗಳು, ಪ್ರತಿ ಬಾರಿ ನೋಡಿದಾಗಲೂ ಪರಿಸರದ ಮಂದಿಯ ಮನಸಿನಾಳದಲ್ಲಿ ಹೇಳಲಾಗದ ನೋವನ್ನು ಹಿಂಡುತ್ತಿದ್ದವು.
ಹೋರಾಟದ ಧೀಮಂತ ನಾಯಕರು ಈ ಐತಿಹಾಸಿಕ ಹೋರಾಟದ ಮುಂಚೂಣಿಯಲ್ಲಿ ನಿಂತು ಕನ್ನಡದ ಧ್ವನಿಯಾದ ಕಲಿಗಳನ್ನು ನಾವು ಮರೆಯುವಂತಿಲ್ಲ. ಅಂದು ಕನ್ನಡದ ಕಟ್ಟಾಳುಗಳಾಗಿ ಗುರುತಿಸಿಕೊಂಡಿದ್ದ ಯು.ಪಿ. ಕುಣಿಕುಳ್ಳಾಯ ಮತ್ತು ಕಳ್ಳಿಗೆ ಮಹಾಬಲ ಭಂಡಾರಿಯವರನ್ನು ಕಾಸರಗೋಡಿನ ಜನತೆ ಪ್ರೀತಿಯಿಂದ ‘ರಾಮ-ಲಕ್ಷ್ಮಣರೆಂದೇ’ ಕರೆಯುತ್ತಿದ್ದರು. ಒಂದೇ ಕಾಲಘಟ್ಟದಲ್ಲಿ ಭಂಡಾರಿಯವರು ಮಂಜೇಶ್ವರದ ಶಾಸಕರಾಗಿ ಹಾಗೂ ಕುಣಿಕುಳ್ಳಾಯರು ಕಾಸರಗೋಡಿನ ಶಾಸಕರಾಗಿ ಕನ್ನಡದ ಹಕ್ಕಿಗಾಗಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಿಂಹದಂತೆ ಗರ್ಜಿಸಿದವರು.
ಇವರೊಂದಿಗೆ: ತಮ್ಮ ಕವಿತೆಗಳ ಮೂಲಕ ಕನ್ನಡಿಗರ ಸುಪ್ತ ಚೈತನ್ಯ ಬಡಿದೆಬ್ಬಿಸಿದ ಕವಿಕುಲ ತಿಲಕ ಕಯ್ಯಾರ ಕಿಂಞಣ್ಣ ರೈ. ಹೋರಾಟದ ಕಿಚ್ಚನ್ನು ಹಳ್ಳಿಹಳ್ಳಿಗಳಿಗೆ ತಲುಪಿಸಿದ ಅಪ್ರತಿಮ ಸಂಘಟಕ ಬಿ. ಎಸ್. ಕಕ್ಕಿಲ್ಲಾಯ. ಇತಿಹಾಸದ ದಾಖಲೆಗಳ ಪುಟಗಳಲ್ಲಿ ಹೆಸರು ಸಿಗದಿದ್ದರೂ, ಕನ್ನಡದ ಪ್ರೇಮಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆದ ಆ ಅಸಂಖ್ಯಾತ ಪುಣ್ಯಾತ್ಮರ ನೆನಪು ಈ ಮಣ್ಣಿನ ಕಣಕಣದಲ್ಲೂ ಅಜರಾಮರವಾಗಿದೆ. ಮಹಾಜನ ವರದಿ ಮತ್ತು ಇಂದಿನ ವಾಸ್ತವ ಈ ಎಳೆಯ ಬಾಲಕರ ಬಲಿದಾನಕ್ಕೆ ಮಣಿದ ಕೇಂದ್ರ ಸರ್ಕಾರವು, ಗಡಿ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ ಅವರ ನೇತೃತ್ವದಲ್ಲಿ 1966ರಲ್ಲಿ ಆಯೋಗವನ್ನು ರಚಿಸಿತು. ಮಹಾಜನರು ತಮ್ಮ ವರದಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, “ಚಂದ್ರಗಿರಿ ಹೊಳೆಯ ಉತ್ತರಕ್ಕಿರುವ ಕಾಸರಗೋಡು ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕು” ಎಂದು ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ನ್ಯಾಯಯುತ ವರದಿ ಇಂದಿಗೂ ಕಡತಗಳಲ್ಲಿ ಧೂಳು ಹಿಡಿಯುತ್ತಿದೆ.
: ಕಾಲ ಗತಿಸಿದರೂ ಆರುವುದೆ ಭಾಷಾಭಿಮಾನದ ಜ್ಯೋತಿ?
ಇಂದು ನಮ್ಮೆದುರಿಗಿರುವ ಸವಾಲು ಕೇವಲ ಗಡಿರೇಖೆಗಳನ್ನು ಮರುಗುರುತಿಸುವುದಲ್ಲ; ಬದಲಾಗಿ ಆ ಇಬ್ಬರು ಬಾಲಕರು ಯಾವ ಭಾಷೆಯ ಉಸಿರಿಗಾಗಿ ಪ್ರಾಣಾರ್ಪಣೆ ಮಾಡಿದರೋ ಆ ‘ಕನ್ನಡ’ತನದ ಘನತೆಯನ್ನು ಎದೆಯಾಳದಲ್ಲಿ ಕಾಪಿಟ್ಟುಕೊಳ್ಳುವುದು. ಶಾಂತಾರಾಮ ಶೆಣೈ ಮತ್ತು ಸುಧಾಕರ ಅಗ್ಗಿತ್ತಾಯರು ಹರಿಸಿದ ರಕ್ತದ ಕಣಗಳು ಇಂದಿಗೂ ಸಪ್ತ ಭಾಷಾ ಸಂಗಮದ ಈ ಮಣ್ಣಿನಲ್ಲಿ ಕನ್ನಡದ ಬೇರುಗಳನ್ನು ಸಜೀವವಾಗಿರಿಸಿವೆ.
ಸಮಯ ಉರುಳಿದಂತೆ ಹೋರಾಟದ ಕೆಚ್ಚು ಮರೆಯಾಗಬಹುದು, ಆದರೆ ಆ ಬಲಿದಾನದ ಸತ್ಯವನ್ನು ಇತಿಹಾಸ ಎಂದಿಗೂ ಅಳಿಸಲಾರದು. ಕಾಸರಗೋಡಿನ ಕನ್ನಡಿಗರು ಪರಕೀಯತೆಯ ನೋವಿನಲ್ಲೂ ತಮ್ಮ ಭಾಷೆಯನ್ನು ತಾಯಿಯಂತೆ ಅಪ್ಪಿಕೊಂಡಿರುವುದು ಆ ಹುತಾತ್ಮರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
”ಭೂಪಟದ ಗೆರೆಗಳು ಬದಲಾಗಬಹುದು, ಆದರೆ ಹಿರಿಯರು ಬಿತ್ತಿ ಹೋದ ಭಾಷಾ ನಿಷ್ಠೆಯ ಸಂಸ್ಕಾರ ನಮ್ಮ ಉಸಿರಾಗಿ ಸದಾ ಜಾಗೃತವಾಗಿರಲಿ.”
(ಹಳೆಯ ಘಟನೆಗಳನ್ನು ನೆನಪಿನಾಳದಿಂದ ಮರುನೋಟ ಬೀರಲು ಪ್ರಯತ್ನಿಸಿದವರು: ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್, ಚಲ್ಲಂಗೋಡು ಶಂಕರನಾರಾಯಣ ಭಟ್ಟ್ ಮತ್ತು ಪ್ರೊ. ಪಿ. ಎನ್. ಮೂಡಿತ್ತಾಯರು)
✍️ ಬರಹ: ದಯಾನಂದ ರೈ ಕಳ್ವಾಜೆ