ಮಂಗಳೂರು: ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ವೇಗ ದೊರೆತಿದ್ದು, ವಿವಿಧ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರಾದ ಐವನ್ ಡಿಸೋಜ ತಿಳಿಸಿದ್ದಾರೆ.
ನಗರದ ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಪೀಠಕ್ಕೆ ಅನುಮತಿ ದೊರಕಿದ ಕೂಡಲೇ ಪ್ರಾರಂಭಿಕವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ನಂತರ ಸೂಕ್ತ ಸ್ಥಳದಲ್ಲಿ ಶಾಶ್ವತ ಪೀಠ ಸ್ಥಾಪನೆಗೊಳ್ಳಲಿದೆ ಎಂದು ಹೇಳಿದರು.
ಹೈಕೋರ್ಟ್ ಪೀಠ ಸ್ಥಾಪನೆಗೆ ಅಗತ್ಯವಾದ ಕೋರ್ಟ್ ಹಾಲ್‌ಗಳು, ದಾಖಲೆ ಸಂಗ್ರಹಣಾ ಸ್ಥಳ ಸೇರಿದಂತೆ ಮೂಲಸೌಕರ್ಯಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸುಮಾರು 5.5 ಎಕರೆ ಜಾಗದಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿಯ ನಾಲ್ಕು ಅಂತಸ್ತಿನ ಕಟ್ಟಡವನ್ನು ಪೀಠಕ್ಕೆ ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ, ಮಂಗಳೂರಿನಲ್ಲಿ ಇರುವ ವಿಚಾರಣಾಧೀನ ಕೈದಿಗಳ ಜೈಲು ಮುಡಿಪುವಿಗೆ ಸ್ಥಳಾಂತರವಾದ ಬಳಿಕ ಆ ಜಾಗವೂ ಲಭ್ಯವಾಗಲಿದೆ. ಆದರೆ ಆ ಪ್ರಕ್ರಿಯೆಗೆ ಇನ್ನೂ ಎರಡು-ಮೂರು ವರ್ಷಗಳು ಬೇಕಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಹಳೆಯ ಡಿಸಿ ಕಚೇರಿ ಕಟ್ಟಡದಲ್ಲೇ ಪೀಠ ಸ್ಥಾಪನೆ ಸಾಧ್ಯವಿದೆ ಎಂದು ಹೇಳಿದರು. ಸ್ಥಳ ಪರಿಶೀಲನೆಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಭೇಟಿ ನೀಡಲಿದ್ದು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಈ ಹೋರಾಟವು ಸಾಮಾನ್ಯ ಜನರು, ವಕೀಲರ ಸಂಘ, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ. ಪೋಸ್ಟ್‌ಕಾರ್ಡ್ ಮತ್ತು ಇಮೇಲ್ ಚಳವಳಿಗಳ ಮೂಲಕ ಹೈಕೋರ್ಟ್ ನ್ಯಾಯಾಧೀಶರ ಗಮನ ಸೆಳೆಯಲಾಗಿದ್ದು, ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಅಗತ್ಯತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಾದರಿಯಲ್ಲಿ ಮಂಗಳೂರಲ್ಲಿಯೂ ಸಂಚಾರಿ ಪೀಠ ಸ್ಥಾಪನೆಯಾಗುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಗಮನಕ್ಕೆ ಅಂಕಿಅಂಶಗಳೊಂದಿಗೆ ವಿಷಯವನ್ನು ತಲುಪಿಸಲಾಗಿದೆ. ವ್ಯಾಪಾರಿಗಳು, ಕೈಗಾರಿಕಾ ವಲಯದವರು, ವಕೀಲರು, ನ್ಯಾಯಾಲಯದ ವಾದಿಗಳು, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳೊಂದಿಗೆ ಚರ್ಚೆಗಳು ನಡೆಸಲಾಗಿದ್ದು, ಪೀಠ ಸ್ಥಾಪನೆಗೆ ಒಗ್ಗಟ್ಟಿನ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ಇದೇ ವೇಳೆ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ನರೇಂದ್ರ ಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು. ಇತರ ನ್ಯಾಯಾಧೀಶರೂ ಸಹ ಈ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಘವೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ್, ಸರಕಾರಿ ವಕೀಲ ಎಂ.ಪಿ. ನೊರೊನ್ಹ ಹಾಗೂ ಭಾಸ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.