ಮಂಜೇಶ್ವರ/ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಿರೀಕ್ಷಿತ ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದು, ಆಡಳಿತಾರೂಢ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಈ ಅಲೆ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎಡರಂಗದ ಭದ್ರಕೋಟೆಗಳಾದ ತ್ರಿಕರಿಪುರ ಮತ್ತು ಉದುಮಾದಲ್ಲೂ ಯುಡಿಎಫ್ ಬಿರುಕು ಮೂಡಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದೆ.
ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕಣವಾಗಿದ್ದ ಇಲ್ಲಿ, ಯುಡಿಎಫ್ ಅಭ್ಯರ್ಥಿ 26,093 ಮತಗಳ ಬೃಹತ್ ಅಂತರದೊಂದಿಗೆ ಮುನ್ನಡೆ ಸಾಧಿಸಿ ಇತಿಹಾಸ ಬರೆದಿದ್ದಾರೆ. ಇದು ಈ ಕ್ಷೇತ್ರದ ಮಟ್ಟಿಗೆ ದಾಖಲೆಯ ಗೆಲುವಿನ ಅಂತರವಾಗಿದೆ. ಮಧ್ಯಾಹ್ನ 2:10ರ ವೇಳೆಗೆ ಇನ್ನೂ ಐದು ಸುತ್ತಿನ ಎಣಿಕೆ ಬಾಕಿ ಇರುವಾಗಲೇ ಯುಡಿಎಫ್ ಕ್ಯಾಂಪ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಕಾಸರಗೋಡು ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರು 23,240 ಮತಗಳ ಭರ್ಜರಿ ಅಂತರದಿಂದ ಗೆಲುವು ಖಚಿತಪಡಿಸಿಕೊಂಡಿದ್ದಾರೆ.
ಉದುಮದಲ್ಲಿ ಯುಡಿಎಫ್‌ನ ಕೆ. ನೀಲಕಂಠನ್ ಅವರು ಹಾಲಿ ಶಾಸಕ ಎಲ್‌ಡಿಎಫ್‌ನ ಸಿ.ಎಚ್. ಕುಂಞಂಬು ಅವರಿಗೆ ಶಾಕ್ ನೀಡಿದ್ದಾರೆ. ಸುಮಾರು 7,682 ಮತಗಳ ಅಂತರದಿಂದ ನೀಲಕಂಠನ್ ಮುನ್ನಡೆಯಲ್ಲಿದ್ದಾರೆ.
ಕಾಞಂಗಾಡ್: ಇಲ್ಲಿ ಮಾತ್ರ ಎಡರಂಗ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ಎಲ್‌ಡಿಎಫ್ ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ 15,316 ಮತಗಳ ಮುನ್ನಡೆಯಲ್ಲಿದ್ದಾರೆ.
ತ್ರಿಕರಿಪುರ ದಲ್ಲಿಎಡರಂಗದ ವಿ.ಪಿ.ಪಿ ಮುಸ್ತಫಾ ಅವರು ಕೇವಲ 3,798 ಮತಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದು, ತೀವ್ರ ಪೈಪೋಟಿ ಎದುರಾಗಿದೆ.
ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದ್ದರೂ, ಮಂಜೇಶ್ವರ ಮತ್ತು ಕಾಸರಗೋಡಿನ ಬೀದಿ-ಬೀದಿಗಳಲ್ಲಿ ಯುಡಿಎಫ್ ಕಾರ್ಯಕರ್ತರು ಈಗಾಗಲೇ ವಿಜಯೋತ್ಸವ ಆರಂಭಿಸಿದ್ದಾರೆ. ಕಾಸರಗೋಡಿನ ಎಣಿಕೆ ಪೂರ್ಣಗೊಂಡಿದ್ದು, ಮಂಜೇಶ್ವರದಲ್ಲಿ ಅಂತಿಮ ಹಂತದ ಎಣಿಕೆ ಪ್ರಗತಿಯಲ್ಲಿದೆ