ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿಗೆ ಮೂಲಭೂತವಾದಿ ಸಂಘಟನೆಗಳ ಸಂಘಟಿತ ಪ್ರಯತ್ನ ಹಾಗೂ ಎಡರಂಗದಿಂದ ಯುಡಿಎಫ್‌ಗೆ ಮತಗಳ ಸೋರಿಕೆ ಪ್ರಮುಖ ಕಾರಣ ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದರು.
ಚುನಾವಣಾ ಫಲಿತಾಂಶದ ಬಳಿಕ ಕಾಸರಗೋಡು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೋಮು ಧ್ರುವೀಕರಣ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದರು.
ಮಂಜೇಶ್ವರದಲ್ಲಿ ಈ ಬಾರಿ ಎಡರಂಗವು 20 ಸಾವಿರಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದ್ದು, ಸಿಪಿಎಂ ತನ್ನ ಮತಗಳನ್ನು ಯುಡಿಎಫ್‌ಗೆ ವರ್ಗಾಯಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ದೂರಿದರು.
ಮುಸ್ಲಿಂ ಲೀಗ್ ಮತ್ತು ಮೂಲಭೂತವಾದಿ ಸಂಘಟನೆಗಳು ಆರಂಭದಿಂದಲೇ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಸಮುದಾಯಗಳ ಏಕೀಕರಣಕ್ಕೆ ಮುಂದಾಗಿದ್ದವು. ಬಿಜೆಪಿಯನ್ನು ಸೋಲಿಸುವುದೇ ಈ ಒಕ್ಕೂಟದ ಪ್ರಮುಖ ಉದ್ದೇಶವಾಗಿತ್ತು ಎಂದು ಸುರೇಂದ್ರನ್ ಹೇಳಿದರು. ಈ ಪ್ರಕ್ರಿಯೆಗೆ ಎಲ್‌ಡಿಎಫ್ ಸಹ ಮೌನ ಬೆಂಬಲ ನೀಡಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದಾದರೂ ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿಯ ಮತಗಳಲ್ಲಿ ಹಿಂದಿನಿಗಿಂತ ಹೆಚ್ಚಳ ಕಂಡುಬಂದಿದೆ. ಕೇರಳದಲ್ಲಿ ಯುಡಿಎಫ್ ಅಲೆಯ ನಡುವೆಯೂ ಬಿಜೆಪಿಯಿಂದ ಮೂವರು ಶಾಸಕರು ಆಯ್ಕೆಯಾಗಿರುವುದು, ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿಯ ಉದಯಕ್ಕೆ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇರಳವು ಬಿಜೆಪಿಗೆ ಅನಾನುಕೂಲ ರಾಜ್ಯವಲ್ಲ ಎಂಬುದಕ್ಕೂ ಈ ಫಲಿತಾಂಶಗಳು ಸಾಕ್ಷಿಯಾಗಿದ್ದು, ಅನೇಕ ಪ್ರದೇಶಗಳಲ್ಲಿ ಪಕ್ಷದ ಮತಗಳಲ್ಲಿ ಏರಿಕೆ ಕಂಡುಬಂದಿದೆ. ಭವಿಷ್ಯದ ರಾಜಕೀಯದ ದಿಕ್ಕನ್ನು ಸೂಚಿಸುವಂತಹ ಫಲಿತಾಂಶಗಳಿವು ಎಂದು ಸುರೇಂದ್ರನ್ ತಿಳಿಸಿದ್ದಾರೆ.