ಉಡುಪಿ, ಮೇ 7: ಕಳೆದ ಎರಡು ತಿಂಗಳಿನಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಅಡುಗೆ ಅನಿಲ ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿರುವ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್, ಜಿಲ್ಲೆಯ ಗ್ಯಾಸ್ ವಿತರಕ ಏಜೆನ್ಸಿಗಳ ಸರಬರಾಜು ವ್ಯವಸ್ಥೆಯ ಬಗ್ಗೆ ಅಡಿಟ್ ನಡೆಸಬೇಕು ಎಂದು ಆಗ್ರಹಿಸಿದೆ.
ಉಡುಪಿ ಕರಾವಳಿ ಬೈಪಾಸ್ನ ಶಾರದಾ ಹೋಟೆಲ್ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಬಿ. ಗೋವಿಂದ ರಾಜ್ ಹೆಗ್ಡೆ, “ಕಾಳಸಂತೆಯಲ್ಲಿ ಗ್ಯಾಸ್ ದೊರೆಯುತ್ತಿದೆ. ಕೇಟರಿಂಗ್ ವಲಯಕ್ಕೂ ಪೂರೈಕೆ ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಜಿಎಸ್ಟಿ ಹಾಗೂ ಅಬಕಾರಿ ತೆರಿಗೆ ಪಾವತಿಸುವ ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಮಾತ್ರ ಗ್ಯಾಸ್ ದೊರೆಯುತ್ತಿಲ್ಲ” ಎಂದು ದೂರಿದರು.
ಮಧ್ಯಪ್ರಾಚ್ಯದ ಯುದ್ಧವನ್ನು ನೆಪವಾಗಿಟ್ಟುಕೊಂಡು ಕಳೆದ ಎರಡು ತಿಂಗಳಿನಿಂದ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಬಾರ್ ಮತ್ತು ಹೋಟೆಲ್ ಉದ್ಯಮ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.
“ತಿಂಗಳಿಗೆ ₹30ರಿಂದ ₹40 ಸಾವಿರದವರೆಗೆ ಜಿಎಸ್ಟಿ ಪಾವತಿಸುತ್ತಿದ್ದೇವೆ. ಆದರೂ ಬಾರ್ ಹಾಗೂ ವೆಜ್ ರೆಸ್ಟೋರೆಂಟ್ಗಳಿಗೆ ಅಗತ್ಯ ಗ್ಯಾಸ್ ಪೂರೈಕೆ ಇಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಗ್ಯಾಸ್ ಲಭ್ಯವಾಗುತ್ತಿರುವಾಗ ಬಾರ್ ಮತ್ತು ಹೋಟೆಲ್ಗಳಿಗೆ ಮಾತ್ರ ಯಾಕೆ ಸಮಸ್ಯೆ ಎದುರಾಗುತ್ತಿದೆ?” ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಗ್ಯಾಸ್ ಏಜೆನ್ಸಿಗಳ ಸರಬರಾಜು ಮತ್ತು ವಿತರಣೆಯ ಬಗ್ಗೆ ಅಡಿಟ್ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗೆ ಸ್ಪಂದನೆ ದೊರಕದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಸಜ್ಜನ್ ಹೆಗ್ಡೆ ಹಾಗೂ ಹಂಸರಾಜ್ ಶೆಟ್ಟಿ ಉಪಸ್ಥಿತರಿದ್ದರು.