ಮಳೆಗಾಲಕ್ಕೂ ಮುನ್ನ ರಸ್ತೆ ಹೊಂಡ ಮುಚ್ಚಿ ಅಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಎಚ್ಚರಿಕೆ …. !

ಮಂಗಳೂರು: ಮಳೆಗಾಲ ಆರಂಭಕ್ಕೂ ಮುನ್ನ ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳ ಹೊಂಡಗಳನ್ನು ತಕ್ಷಣ ಮುಚ್ಚಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, “ಮಳೆಗಾಲದ ಬಳಿಕ ಡಾಂಬರ್ ಲಭ್ಯತೆ ಸಮಸ್ಯೆಯಾಗುತ್ತದೆ. ಆಗ ರಸ್ತೆ ದುರಸ್ತಿ ವಿಳಂಬವಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತದೆ. ಅಪಘಾತಗಳ ಸಂಭವವೂ ಹೆಚ್ಚಾಗುತ್ತದೆ. ಆದ್ದರಿಂದ ಈಗಲೇ ಅಗತ್ಯ ಪ್ಯಾಚ್ ವರ್ಕ್ ಪೂರ್ಣಗೊಳಿಸಬೇಕು” ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ ತುರ್ತು ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

“ಈಗ ಡಾಂಬರ್ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ನಂತರ ಡಾಂಬರ್ ಸಿಗುವುದಿಲ್ಲ ಎಂಬ ಕಾರಣ ಹೇಳಬಾರದು. ಮಳೆಗಾಲಕ್ಕೂ ಮುನ್ನವೇ ಎಲ್ಲಾ ಹೊಂಡಗಳನ್ನು ಮುಚ್ಚಬೇಕು,” ಎಂದು ಹೇಳಿದರು.

ರಸ್ತೆಗಳ ದುಸ್ಥಿತಿಯಿಂದ ಅಪಘಾತ ಅಥವಾ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಖಾದರ್ ಎಚ್ಚರಿಸಿದರು.

ಜನತೆಯೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರಮುಖ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಅಥವಾ ಹಾನಿಗೊಳಗಾದ ರಸ್ತೆಗಳಿದ್ದರೆ ವಾಟ್ಸಾಪ್ ಮೂಲಕ ಸಂಬಂಧಿತ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

“ಅಧಿಕಾರಿಗಳು ಜನರಿಂದ ದೂರು ಬಂದ ಬಳಿಕ ಕಾರ್ಯನಿರ್ವಹಿಸುವ ಬದಲು ಮುಂಚಿತವಾಗಿಯೇ ಸಮಸ್ಯೆ ಗುರುತಿಸಿ ಕ್ರಮ ಕೈಗೊಳ್ಳಬೇಕು. ಅವರು ಪ್ರೊಆಕ್ಟಿವ್ ಆಗಿರಬೇಕು,” ಎಂದು ಹೇಳಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!