ಮಂಗಳೂರು: ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ಸರ್ಕಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ವಿಚಾರಕ್ಕೆ ಸಂಬಂಧಿಸಿ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, “ಒಬ್ಬರಿಬ್ಬರ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, “ವಿರೋಧ ವ್ಯಕ್ತಪಡಿಸುತ್ತಿರುವವರು ಸ್ಥಳೀಯರಲ್ಲ. ಹೊರಗಿನಿಂದ ಬಂದು ನೆಲೆಸಿರುವ ಕೆಲವರು ಹಾಗೂ ಕೆಲವು ಸಂಘಟನೆಗಳಿಗೆ ಸಂಬಂಧಪಟ್ಟವರು ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಊರಿನ ಜನರು ಅದಕ್ಕೆ ಮಹತ್ವ ನೀಡಲು ಸಿದ್ಧರಿಲ್ಲ” ಎಂದು ಹೇಳಿದರು.
ಕುತ್ತಾರು, ಮದನಿ ನಗರ ಮತ್ತು ಸುಭಾಷ್ ನಗರ ಪ್ರದೇಶಗಳಲ್ಲಿ ಎಲ್ಲಾ ಜಾತಿ ಹಾಗೂ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಹಿಂದೆಯೂ ಒಗ್ಗಟ್ಟಿನಿಂದ ಇದ್ದರು, ಈಗಲೂ ಇದ್ದಾರೆ ಮತ್ತು ಮುಂದೆಯೂ ಅದೇ ರೀತಿ ಇರುತ್ತಾರೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
“ಇದನ್ನು ದೊಡ್ಡ ಚರ್ಚೆಯ ವಿಷಯವಾಗಿಸಬಾರದು. ಕೆಲವರ ಹೇಳಿಕೆಯನ್ನು ಆಧರಿಸಿ ಅನಗತ್ಯ ಚರ್ಚೆ ನಡೆಯಬಾರದು. ಆ ಚರ್ಚೆಗೆ ಯಾರೂ ಮಹತ್ವ ಕೊಡಬಾರದು,” ಎಂದು ಹೇಳಿದರು.
ಕೊರಗಜ್ಜ ಸರ್ಕಲ್ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಸಕಾರಾತ್ಮಕ ಮನೋಭಾವದಿಂದ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
“ಸಮಾಜದಲ್ಲಿ ನಕಾರಾತ್ಮಕ ಚಿಂತನೆ ಬದಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು. ದಾರಿ ತಪ್ಪಿದ ಕೆಲವರನ್ನು ಸರಿಪಡಿಸುವ ಜವಾಬ್ದಾರಿ ಸ್ಥಳೀಯರದು, ಅದನ್ನು ನಾವು ಮಾಡುತ್ತೇವೆ,” ಎಂದು ಯು.ಟಿ. ಖಾದರ್ ಹೇಳಿದರು.