ಪ್ರಧಾನಿ ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ; ಎನ್‌ಐಎ ತನಿಖೆ ಆರಂಭ

ಬೆಂಗಳೂರು: ನಗರದ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆಯಾಗಿರುವ ಘಟನೆ ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ National Investigation Agency (ಎನ್‌ಐಎ) ತನಿಖೆಗೆ ಇಳಿದಿದ್ದು, ಭದ್ರತಾ ಲೋಪದ ಕುರಿತು ಸವಿಸ್ತಾರ ಪರಿಶೀಲನೆ ಆರಂಭಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎನ್‌ಐಎ ಅಧಿಕಾರಿಗಳ ತಂಡವು ಸ್ಫೋಟಕ ಪತ್ತೆಯಾದ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಬೆಂಗಳೂರು ದಕ್ಷಿಣ ವಿಭಾಗದ ಎಸ್‌ಪಿ ಶ್ರೀನಿವಾಸ ಗೌಡರಿಂದ ಪ್ರಾಥಮಿಕ ತನಿಖಾ ವರದಿ ಪಡೆದ ಅಧಿಕಾರಿಗಳು, ಪ್ರಧಾನಿಯವರ ಭದ್ರತೆಗೆ ಧಕ್ಕೆಯೊಡ್ಡುವ ಉದ್ದೇಶದಿಂದ ಸಂಚು ರೂಪಿಸಲಾಗಿದೆಯೇ ಅಥವಾ ಉಗ್ರ ಸಂಘಟನೆಗಳ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇದೇ ವೇಳೆ Research and Analysis Wing (ರಾ), ಕೇಂದ್ರ ಗುಪ್ತಚರ ಇಲಾಖೆ ಹಾಗೂ National Security Guard (ಎನ್‌ಎಸ್‌ಜಿ) ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಫೋಟಕಗಳನ್ನು ಉದ್ದೇಶಪೂರ್ವಕವಾಗಿ ಇರಿಸಲಾಗಿದೆ ಎಂಬ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ, ಸ್ಫೋಟಕ ತಯಾರಿಕೆಗೆ ಬಳಸಲಾದ ವಸ್ತುಗಳ ಮೂಲ ಪತ್ತೆಗೆ ತನಿಖೆ ಚುರುಕುಗೊಂಡಿದೆ.

ಘಟನೆಯ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯ ಬಳಿಕವೇ ಈ ಪ್ರಕರಣದ ಹಿಂದಿರುವ ನಿಜಸ್ವರೂಪ ಬಹಿರಂಗವಾಗುವ ಸಾಧ್ಯತೆ ಇದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!