“ಜಲ ಕಂಟಕ” ಎಚ್ಚರಿಕೆ: ಮತ್ತೆ ಚರ್ಚೆಗೆ ಗ್ರಾಸವಾದ ಕೋಡಿ ಮಠದ ಶ್ರೀಗಳ ಭವಿಷ್ಯವಾಣಿ

ಬೆಂಗಳೂರು, ಮೇ 12: ಭವಿಷ್ಯವಾಣಿಗಳು ಹಾಗೂ ಅಪಶಕುನ ನುಡಿಗಳ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗುವ ಕೋಡಿ ಮಠದ ಶ್ರೀಗಳು ಮತ್ತೆ ತಮ್ಮ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನವೇ ಅವರು ನೀಡಿರುವ ಹೊಸ ಭವಿಷ್ಯ ನುಡಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.


ಈ ಬಾರಿ “ಮಳೆ ಬಂದರೂ ಕಷ್ಟ, ಬರದಿದ್ದರೂ ನಷ್ಟ” ಎಂಬ ತಮ್ಮ ಹಿಂದಿನ ಹೇಳಿಕೆಗಳಿಗೆ ‘ಜಲ ಕಂಟಕ’ ಎಂಬ ಹೊಸ ಪದವನ್ನು ಸೇರಿಸಿರುವುದು ವಿಶೇಷ ಗಮನ ಸೆಳೆದಿದೆ. ರಾಜ್ಯದಲ್ಲಿ ಮಳೆ ಪರಿಸ್ಥಿತಿ, ಪ್ರಕೃತಿ ವೈಪರೀತ್ಯಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳ ಬಗ್ಗೆ ಶ್ರೀಗಳು ಸೂಚಕವಾಗಿ ಮಾತನಾಡಿದ್ದಾರೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.


ರಾಜಕೀಯ ವಿಚಾರಗಳ ಕುರಿತು ಕೋಡಿ ಮಠದ ಶ್ರೀಗಳು ನೀಡುವ ರೂಪಕಾತ್ಮಕ ಹೇಳಿಕೆಗಳು ಕೂಡ ಆಗಾಗ ಚರ್ಚೆಗೆ ಗ್ರಾಸವಾಗುತ್ತಿವೆ. “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಂಭೀರವಾಗಿ ನಡೆಯಿತು” ಎಂಬ ಅವರ ಇತ್ತೀಚಿನ ಹೇಳಿಕೆ ಹಲವು ರಾಜಕೀಯ ಅರ್ಥೈಸಿಕೆಗಳಿಗೆ ಕಾರಣವಾಗಿದೆ.
ರಾಜಕೀಯ ವಲಯದಲ್ಲಿ ಈ ಹೇಳಿಕೆಗೆ ವಿಭಿನ್ನ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿದ್ದು, ಅಧಿಕಾರದ ಅಸ್ಥಿರತೆ ಹಾಗೂ ಆಡಳಿತದ ಬದಲಾವಣೆಗಳ ಕುರಿತು ಶ್ರೀಗಳು ಪರೋಕ್ಷ ಸಂದೇಶ ನೀಡಿರುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಇದೇ ವೇಳೆ, ಕೋಡಿ ಮಠದ ಶ್ರೀಗಳ ಭವಿಷ್ಯವಾಣಿಗಳು ಪ್ರತೀ ಬಾರಿ ಸಾರ್ವಜನಿಕ ವಲಯದಲ್ಲಿ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕುತ್ತಿದ್ದು, ಅವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!