ವಿ.ಡಿ. ಸತೀಶನ್ vs ಕೆ.ಸಿ. ವೇಣುಗೋಪಾಲ್: ಅಂತಿಮ ಘಟ್ಟದಲ್ಲಿ ಸಿಎಂ ಪೈಪೋಟಿ

ಚರ್ಚೆಗಳಿಗೆ ಇಂದು ಅಂತ್ಯ ಸಿಗುವ ಸಾಧ್ಯತೆ ಇದೆ. ಗುರುವಾರ ತಿರುವನಂತಪುರಂನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲಾಗಲಿದೆ.

ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ದೀಪಾ ದಾಸ್ ಮುನ್ಷಿ, ವೀಕ್ಷಕರಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.ಹಿರಿಯ ನಾಯಕರಾದ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ನಡುವೆ ಕಳೆದ ಒಂಬತ್ತು ದಿನಗಳಿಂದ ತೀವ್ರ ಪೈಪೋಟಿ ನಡೆಯುತ್ತಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದವು. ಸುಮಾರು 40 ನಿಮಿಷಗಳ ಕಾಲ ನಡೆದ ಚರ್ಚೆಯ ನಂತರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕೇರಳದ ಮುಂದಿನ ಮುಖ್ಯಮಂತ್ರಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕೃತ ಘೋಷಣೆ ಗುರುವಾರ ನಡೆಯಲಿದೆ” ಎಂದು ತಿಳಿಸಿದ್ದಾರೆ.

ಇದರ ನಡುವೆ “ಪಟ್ಟದ ಆಟ”ದಲ್ಲಿ ಅಂತಿಮವಾಗಿ ಯಾರಿಗೆ ಜಯ ಸಿಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮುಂದುವರಿದಿದೆ. ಹೊಸದಾಗಿ ಆಯ್ಕೆಯಾದ ಶಾಸಕರು, ಸಂಸದರು, ಮಾಜಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಇತರ ಹಿರಿಯ ನಾಯಕರೊಂದಿಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕವೇ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿರುವುದು ತಿಳಿದುಬಂದಿದೆ.

ಮಂಗಳವಾರ ರಾಹುಲ್ ಗಾಂಧಿ ಹಲವು ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಇದೇ ವೇಳೆ ತಿರುವನಂತಪುರಂನ ವೆಲ್ಲಯಂಬಲಂನಲ್ಲಿರುವ ಕೆಪಿಸಿಸಿ ಕಚೇರಿ ‘ಇಂದಿರಾ ಭವನ’ದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿ ತೀವ್ರ ಕುತೂಹಲ ವ್ಯಕ್ತಪಡಿಸಿದರು.

ಇದೀಗ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್ ಅವರಿಗೆ ಮುನ್ನಡೆ ಸಿಕ್ಕಿರುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ರಾಹುಲ್ ಗಾಂಧಿಯವರ ಆಪ್ತರಾಗಿರುವ ವೇಣುಗೋಪಾಲ್ ಅವರಿಗೆ ಕಾಂಗ್ರೆಸ್‌ನ ಬಹುಪಾಲು ಶಾಸಕರು ಮತ್ತು ಸಂಸದರ ಬೆಂಬಲವಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ವಿ.ಡಿ. ಸತೀಶನ್ ಅವರಿಗೆ ಐಯುಎಂಎಲ್ ಸೇರಿದಂತೆ ಯುಡಿಎಫ್ ಮೈತ್ರಿ ಪಕ್ಷಗಳ ಬೆಂಬಲ ಮುಂದುವರಿದಿದೆ. ಆದರೆ ಕಾಂಗ್ರೆಸ್‌ನ 63 ಶಾಸಕರ ಪೈಕಿ ಕನಿಷ್ಠ 47 ಶಾಸಕರ ಬೆಂಬಲ ಕೆ.ಸಿ. ವೇಣುಗೋಪಾಲ್ ಪರವಾಗಿದೆ ಎನ್ನಲಾಗಿದ್ದು, ಅಂತಿಮ ಘೋಷಣೆಯತ್ತ ಎಲ್ಲರ ಚಿತ್ತ ಮೂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!