ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ತಿರುವನಂತಪುರಂ: ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ (ಯುಡಿಎಫ್) ಭರ್ಜರಿ ಗೆಲುವಿನ ಬಳಿಕ ಕಳೆದ ಹತ್ತು ದಿನಗಳಿಂದ ಮುಂದುವರಿದಿದ್ದ ಮುಖ್ಯಮಂತ್ರಿ ಆಯ್ಕೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಕೇರಳದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ಹಾಗೂ ಮಾಜಿ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಿದೆ.

ಮೇ 4ರಂದು ಪ್ರಕಟವಾದ ಕೇರಳ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭೂತಪೂರ್ವ ಗೆಲುವು ಸಾಧಿಸಿತ್ತು. ಆದರೆ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ವಿ.ಡಿ. ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದರಿಂದಾಗಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಸುಮಾರು ಹತ್ತು ದಿನಗಳ ಕಾಲ ವಿಳಂಬವಾಗಿತ್ತು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೆ.ಸಿ. ವೇಣುಗೋಪಾಲ್ ಸ್ಪರ್ಧಿಸಿರಲಿಲ್ಲ. ಮತ್ತೊಂದೆಡೆ, ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ ಅವರು ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಿ ಜನರ ಗಮನ ಸೆಳೆದಿದ್ದರು. ಈ ಹಿನ್ನೆಲೆ ರಾಜ್ಯದ ಜನಾಭಿಪ್ರಾಯವೂ ಸತೀಶನ್ ಪರವಾಗಿತ್ತು ಎನ್ನಲಾಗಿದೆ.

ಇನ್ನೊಂದೆಡೆ, ಕಾಂಗ್ರೆಸ್ ಶಾಸಕರಲ್ಲಿ ಬಹುತೇಕರು ಕೆ.ಸಿ. ವೇಣುಗೋಪಾಲ್ ಅವರಿಗೆ ಬೆಂಬಲ ಸೂಚಿಸಿದ್ದರೆಂಬ ಮಾತುಗಳು ಕೇಳಿಬಂದಿದ್ದವು. ಆದಾಗ್ಯೂ, ಕೊನೆಗೆ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರ ಹೆಸರನ್ನು ಅಂತಿಮಗೊಳಿಸಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!