ಮಂಗಳೂರು:ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರೇಮಂಡ್ ಡಿಕುನ್ಹಾ ತಾಕೊಡೆ ಅವರು ರಚಿಸಿರುವ ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿನ ಕೊಂಕಣಿ ಕವನ ಸಂಕಲನ ‘ಚುನ್ಯಾಚೊ ಫೊಂಡ್’ ’ ಕೃತಿಯ ಬಿಡುಗಡೆ ಸಮಾರಂಭವು ಮಂಗಳೂರಿನ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಕೃತಿಯನ್ನು ‘ಮೈಕಲ್ ಡಿಸೋಜಾ ವಿಷನ್ ಕೊಂಕಣಿ’ ಸಂಸ್ಥೆಯ ಸಂಸ್ಥಾಪಕ, ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರಾದ ಮೈಕಲ್ ಡಿಸೋಜಾ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೈಕಲ್ ಡಿಸೋಜಾ, ‘ಮೈಕಲ್ ಡಿಸೋಜಾ ವಿಷನ್ ಕೊಂಕಣಿ’ ಸಂಸ್ಥೆಯ ಮೂಲಕ ಮಾತೃಭಾಷೆಯಲ್ಲಿ ಕೃತಿ ಪ್ರಕಟಿಸುವ ಬರಹಗಾರರಿಗೆ ಮುದ್ರಣ ಸಹಾಯ ನೀಡಲಾಗುತ್ತಿದೆ. ಇದೀಗ ಬಿಡುಗಡೆಯಾದ ಈ ಕೃತಿ ಸಂಸ್ಥೆಯ 42ನೇ ಪುಸ್ತಕವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ 100 ಪುಸ್ತಕಗಳನ್ನು ಪ್ರಕಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೃತಿ ರಚಿಸಿ ಮುದ್ರಣಕ್ಕೆ ಅನುದಾನದ ಕೊರತೆ ಎದುರಿಸುತ್ತಿರುವ ಸಾಹಿತ್ಯಕರ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದ ವಿಷನ್ ಕೊಂಕಣಿ ಮುಖ್ಯಸ್ಥ ಹೆಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಮಾತನಾಡಿ, ಸಂಸ್ಥೆಯ ಮೂಲಕ ಸಾಹಿತಿಗಳಿಗೆ ನಿರಂತರ ಸಹಾಯ ಒದಗಿಸಲಾಗುತ್ತಿದೆ. ಸುಮಾರು ನಲವತ್ತು ಲಕ್ಷ ರೂ. ಮೌಲ್ಯದ ಪಂಚವಾರ್ಷಿಕ ಯೋಜನೆ ಇದಾಗಿದ್ದು, ಪುಸ್ತಕ ಪ್ರಕಟಿಸಲು ಆಸಕ್ತರು ತಮ್ಮ ಕರಡು ಪ್ರತಿ ಹಾಗೂ ಪಿಡಿಎಫ್ ಪ್ರತಿಯನ್ನು ಆಯ್ಕೆ ಸಮಿತಿಗೆ ಸಲ್ಲಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, “ಜಗತ್ತಿನ ಅತ್ಯಂತ ಸಮೃದ್ಧ ಭಾಷೆ ಮೌನ. ಸಾಹಿತ್ಯ ಮತ್ತು ಕಲೆ ಎಲ್ಲ ಭಾಷೆಗಳ ಮೀರಿದ ಶಕ್ತಿಯನ್ನು ಹೊಂದಿವೆ. ಪತ್ರಕರ್ತ ರೇಮಂಡ್ ಅವರು ಕೃತಿ ಪ್ರಕಟಿಸಿರುವುದು ಪತ್ರಿಕೋದ್ಯಮ ಕುಟುಂಬಕ್ಕೆ ಹೆಮ್ಮೆಯ ವಿಚಾರ” ಎಂದು ಅಭಿಪ್ರಾಯಪಟ್ಟರು.
ಅತಿಥಿಗಳನ್ನು ಸ್ವಾಗತಿಸಿದ ರೇಮಂಡ್ ಡಿಕುನ್ಹಾ ತಾಕೊಡೆ, ಪುಸ್ತಕ ಬಿಡುಗಡೆಗೆ ಮೈಕಲ್ ಡಿಸೋಜಾ ನೀಡಿದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅವರು ದಾನ ಮಾಡುವುದಷ್ಟೇ ಅಲ್ಲ, ಆ ನೆರವು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಈ ಕೃತಿಯನ್ನು ಗೋವಾದಲ್ಲೂ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೈಕಲ್ ಡಿಸೋಜಾರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಮೆಲ್ವಿನ್ ರೊಡ್ರಿಗಸ್, ಟೈಟಸ್ ನೊರೊನ್ಹಾ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಜೇಶ್ ಪೂಜಾರಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರರ ಪುತ್ರಿ ಹಾಗೂ ಯುವ ಪತ್ರಕರ್ತೆ ರಿಯಾನಾ ಡಿಕುನ್ಹಾ ಧನ್ಯವಾದ ಸಲ್ಲಿಸಿದರು.