ರಾಜ್ಯದ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ವೆಚ್ಚ ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಕಠಿಣ ಹಣಕಾಸು ಶಿಸ್ತು ಪಾಲಿಸುವಂತೆ ಹಾಗೂ ಲಾಭದಾಯಕವಲ್ಲದ ಯೋಜನೆಗಳನ್ನು ಕೈಬಿಡುವಂತೆ ಇಲಾಖೆಗೆ ನಿರ್ದೇಶಿಸಲಾಗಿದೆ.

ಮುಂದಿನ ಹಣಕಾಸು ವರ್ಷದ ಬಜೆಟ್ ಸಿದ್ಧತೆಗಳಿಗೆ ಸಂಬಂಧಿಸಿ ಹಣಕಾಸು ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ವೆಚ್ಚ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಲಾಗಿದೆ.
ಪ್ರಸಕ್ತ ಬಜೆಟ್‌ನಲ್ಲೂ ಹಾಗೂ ಮುಂದಿನ ಬಜೆಟ್‌ನಲ್ಲೂ ಕಟ್ಟುನಿಟ್ಟಿನ ವೆಚ್ಚ ಕಡಿತ ಅನಿವಾರ್ಯವಾಗಲಿದೆ ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ. ವೇತನವನ್ನು ಹೊರತುಪಡಿಸಿ ಇತರೆ ವೆಚ್ಚಗಳಿಗೆ ಈ ವರ್ಷದಷ್ಟೇ ಅನುದಾನವನ್ನು ಮುಂದಿನ ವರ್ಷವೂ ನಿಗದಿಪಡಿಸಬೇಕು ಎಂದು ಸೂಚಿಸಲಾಗಿದೆ.

ಲಾಭದಾಯಕವಲ್ಲದ ಯೋಜನೆಗಳನ್ನು ಕೈಬಿಡಬೇಕು. ಮುಂದೂಡಬಹುದಾದ ದುರಸ್ತಿ ಕಾಮಗಾರಿಗಳು ಹಾಗೂ ಅಗತ್ಯವಿಲ್ಲದ ವೆಚ್ಚಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಪರಿಷ್ಕೃತ ಅಂದಾಜು (Revised Estimate) ಸಿದ್ಧಪಡಿಸುವಾಗ, ಬಜೆಟ್‌ನಲ್ಲಿ ಈಗಾಗಲೇ ಮೀಸಲಿಟ್ಟಿರುವ ಮೊತ್ತವನ್ನು ಮೀರದಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ವೆಚ್ಚ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಪ್ರತಿ ವರ್ಷವೂ ಹೊರಡಿಸುತ್ತಿದ್ದು, ಈ ಬಾರಿಯೂ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದೇ ರೀತಿಯ ಸೂಚನೆಗಳನ್ನು ನೀಡಲಾಗಿದೆ.

