ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ನಗರದ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೇ 17 ಮತ್ತು 18ರಂದು ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ-2026’ ಆಯೋಜಿಸಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17ರಂದು ಬೆಳಿಗ್ಗೆ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಗೋವಾದ ಕಲೆ ಮತ್ತು ಸಂಸ್ಕೃತಿ ಪೋಷಕಿ ಹಾಗೂ ಶಿಕ್ಷಣ ತಜ್ಞೆ ಸುಲಕ್ಷಣಾ ಸಾವಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮೆಲ್ವಿನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಡಾ. ಕಿರಣ್ ಬುಡ್ಕುಳೆ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಕೊಂಕಣಿ ಸಾಹಿತ್ಯ ಪ್ರಕಾರಗಳು ಹಾಗೂ ಕಾವ್ಯ-ಕಾದಂಬರಿಗಳ ಬೆಳವಣಿಗೆ ಕುರಿತು ಡಾ. ಪ್ರಕಾಶ್ ವಬ್ರೇಕರ್, ಡಾ. ಬಿ. ದೇವದಾಸ್ ಪೈ, ಎಚ್.ಎಂ. ಪೆರ್ನಾಳ್, ಡಾ. ಹನುಮಂತ್ ಸಿ. ಚೋಪ್ಲೇಕರ್ ಹಾಗೂ ಡಾ. ರಮಿತಾ ಪಿ. ಗುರವ್ ಮಹತ್ವದ ವಿಚಾರ ಮಂಡನೆ ನಡೆಸಲಿದ್ದಾರೆ ಎಂದರು.
ಅದೇ ದಿನ ಮಧ್ಯಾಹ್ನ 2.30ಕ್ಕೆ ಕವಿತಾ ಟ್ರಸ್ಟ್ ವತಿಯಿಂದ ಕೊಂಕಣಿ ಕವಿ ಪಿ.ಜಿ. ಕಾಮತ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘ಕಾವ್ಯಾತ್ಮಕ ಜೀವನದ ಒಂದು ಕವಿ ಪರಿಚಯ’ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಕುಮಟಾದ ಲಕ್ಷ್ಮೀನರಸಿಂಹ ಕಲಾಮಂಡಳಿಯಿಂದ ‘ನರಸಿಂಹ ಅವತಾರ’ ನೃತ್ಯ ರೂಪಕ, ಮಂಗಳೂರಿನ ಸಾಧನಾ ಬಳಗದಿಂದ ಹಾಸ್ಯ ರಸಾಯನ ಹಾಗೂ ಅಂಕಿತಾ ಕಾಮತ್ ಪಂಗಡದ ಬಾಲ ಕಲಾವಿದರಿಂದ ‘ವೀರನಾರಿ ಅಹಲ್ಯಾಬಾಯಿ ಹೋಳ್ಳರ್’ ನಾಟಕ ಪ್ರದರ್ಶನಗೊಳ್ಳಲಿದೆ.
ಮೇ 18ರಂದು ಬೆಳಿಗ್ಗೆ 9 ಗಂಟೆಗೆ ಜಾನಪದ ಗೋಷ್ಠಿಗಳು ನಡೆಯಲಿದ್ದು, ಗೋವಾ ವಿಶ್ವವಿದ್ಯಾಲಯ ಉಪ ಡೀನ್ ಡಾ. ಪ್ರಕಾಶ್ ಎಸ್. ಪಾರಿಯೆಂಕರ್ ಉದ್ಘಾಟಿಸಲಿದ್ದಾರೆ. ಬಳಿಕ ‘ನ್ಯಾನೋ ಕಥೆಗಳ ಪ್ರಸ್ತುತಿ’ ಹಾಗೂ ಹಿರಿಯ ಕಲಾ ವಿಮರ್ಶಕ ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ‘ಯಕ್ಷಗಾನ ಕಲೆ ಮತ್ತು ಕೊಂಕಣಿ ಜನರು’ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದೆ.
ಮಧ್ಯಾಹ್ನ ಲೋಕಗೀತ ಗಾಯನ ಹಾಗೂ ಜಾನಪದ ಗೀತೆಗಳ ವಾಚನ ಕಾರ್ಯಕ್ರಮ ನಡೆಯಲಿದ್ದು, ಅಪರಾಹ್ನ 2.30ಕ್ಕೆ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಯುವ ಕೊಂಕಣಿ ಬರಹಗಾರರ ಚರ್ಚಾಗೋಷ್ಠಿ ಆಯೋಜಿಸಲಾಗಿದೆ ಎಂದರು.
ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆ. ಅರವಿಂದ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಹಿರಿಯ ವಕೀಲ ಕೆ. ಜಗದೀಶ್ ಕಾಮತ್ ಅವರು ‘ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ನಾಯಕ್, ಬಿ.ಆರ್. ಭಟ್, ಮೆಲ್ವಿನ್ ರೋಡ್ರಿಗಸ್, ದೇವದಾಸ್ ಪೈ, ಎಂ.ಆರ್. ಕಾಮತ್ ಹಾಗೂ ಗೋವಿಂದ ರಾಯ ಪ್ರಭು ಉಪಸ್ಥಿತರಿದ್ದರು.