ತಿರುವನಂತಪುರಂ, ಮೇ 18: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸತೀಶನ್ ಸೇರಿದಂತೆ 20 ಮಂದಿ ಸಚಿವರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿ ಶಾಸಕರು ಸ್ಥಾನ ಪಡೆದಿದ್ದು, ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಐವರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಇನ್ನುಳಿದಂತೆ ಕೇರಳ ಕಾಂಗ್ರೆಸ್ (ಜೋಸೆಫ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಕೇರಳ ಕಾಂಗ್ರೆಸ್ (ಜಾಕೋಬ್) ಹಾಗೂ ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ (ಸಿಎಂಪಿ) ತಲಾ ಒಂದು ಸ್ಥಾನ ಪಡೆದಿವೆ.
ಕಾಂಗ್ರೆಸ್‌ನಿಂದ ರಮೇಶ್ ಚೆನ್ನಿತ್ತಲ್ , ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ಟಿ. ಸಿದ್ದೀಕ್, ಬಿಂದು ಕೃಷ್ಣ, ಕೆ.ಎ. ತುಳಸಿ, ರೋಜಿ ಎಂ. ಜಾನ್, ಎಂ. ಲಿಜು ಹಾಗೂ ಒ.ಜೆ. ಜಿನೇಶ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಐಯುಎಂಎಲ್ ಪಕ್ಷದಿಂದ ಪಿ.ಕೆ. ಕುಂಞಾಲಿಕುಟ್ಟಿ, ಎನ್. ಶಂಸುದ್ದೀನ್, ಕೆ.ಎಂ. ಶಾಜಿ, ಪಿ.ಕೆ. ಬಶೀರ್ ಹಾಗೂ ವಿ.ಇ. ಅಬ್ದುಲ್ ಗಫೂರ್ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.
ಇತರೆ ಮೈತ್ರಿ ಪಕ್ಷಗಳಿಂದ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್) ಹಾಗೂ ಸಿ.ಪಿ. ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ) ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೆ.ಸಿ. ವೇಣುಗೋಪಾಲ್, ರಾಜೀವ್ ಚಂದ್ರಶೇಖರ್ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ ತಿರುವನಂತಪುರಂನಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ನೂತನ ಸರ್ಕಾರಕ್ಕೆ ಶುಭಾಶಯ ಕೋರಿದರು.