ಬಂಟ್ವಾಳ,ಉದ್ಯೋಗ ಸಿಕ್ಕ ಸಂತೋಷದಲ್ಲಿದ್ದ ಯುವಕನೊಬ್ಬ ಕೆಲಸಕ್ಕೆ ಸೇರುವ ಮುನ್ನವೇ ಅಪರಿಚಿತ ವಾಹನದ ಡಿಕ್ಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಫರಂಗಿಪೇಟೆ ಸಮೀಪದ ಕಡೆಗೋಳಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಬಜಪೆ ಕೈಕಂಬ ನಿವಾಸಿ ಅಭಿಜಿತ್ (28) ಮೃತ ಯುವಕ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಹಸವಾರ ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಅಭಿಜಿತ್ ಅವರು ತಮ್ಮ ಸ್ನೇಹಿತ ಸಂದೀಪ್ ಅವರನ್ನು ಬಂಟ್ವಾಳದ ಅಮ್ಟಾಡಿಯ ಮನೆಗೆ ಬೈಕ್‌ನಲ್ಲಿ ಬಿಟ್ಟು ಬರಲು ತೆರಳಿದ್ದರು. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಫರಂಗಿಪೇಟೆ ಸಮೀಪದ ಕಡೆಗೋಳಿಯಲ್ಲಿ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ಪಲ್ಟಿಯಾಗಿದ್ದು, ಅಭಿಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಸುತೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಧಿಯ ಕ್ರೂರ ಆಟ
ನಿರುದ್ಯೋಗಿಯಾಗಿದ್ದ ಅಭಿಜಿತ್ ಅವರಿಗೆ ಇತ್ತೀಚೆಗೆ Mangalore Refinery and Petrochemicals Limited (ಎಂಆರ್‌ಪಿಎಲ್) ಸಂಸ್ಥೆಯಲ್ಲಿ ಉದ್ಯೋಗ ಲಭಿಸಿತ್ತು. ಮೇ 27ರಂದು ಕೆಲಸಕ್ಕೆ ಸೇರ್ಪಡೆಯಾಗಬೇಕಿದ್ದ ಅವರು, ಹೊಸ ಬದುಕಿನ ಕನಸು ಕಾಣುತ್ತಿದ್ದ ಸಂದರ್ಭದಲ್ಲೇ ದುರಂತ ಸಂಭವಿಸಿದೆ.
“ಕೆಲಸ ಸಿಕ್ಕಿತು” ಎಂಬ ಸಂತೋಷದಲ್ಲಿದ್ದ ಕುಟುಂಬಕ್ಕೆ ಇದೀಗ ಅಳಲಿನ ವಾತಾವರಣ ಆವರಿಸಿದೆ. ಸ್ನೇಹಿತನನ್ನು ಮನೆಗೆ ಬಿಟ್ಟು ಮರಳುವ ವೇಳೆ ಯಮನಂತೆ ಬಂದ ಅಪರಿಚಿತ ವಾಹನ ಅಭಿಜಿತ್ ಅವರ ಜೀವ ಕಸಿದುಕೊಂಡಿದೆ.
ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.