ಮಂಗಳೂರು: ಲಯನ್ಸ್ ಪ್ರಕೋಷ್ಟ ಹಾಗೂ ಲಯನ್ಸ್ ಜಿಲ್ಲೆ 317D ಸಹಯೋಗದಲ್ಲಿ , ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ “ಸುಹಾನಾ ಸಫರ್ ಅಂಡ್ ಬಿನಾಕಾ ಗೀತಮಾಲಾ” ಎಂಬ ಪ್ರತಿಷ್ಠಿತ ಸಂಗೀತ ಕಾರ್ಯಕ್ರಮವು ಮೇ 30 ರ ಶನಿವಾರ ನಗರದ ಸುಜೀರ್ ಸಿ.ವಿ. ನಾಯಕ್ ಹಾಲ್ನಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಟದ ಜಿಲ್ಲಾಧ್ಯಕ್ಷ ಲ/ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 5 ಗಂಟೆಯಿಂದ 5.45ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ 5.45ರಿಂದ ರಾತ್ರಿ 8.45ರವರೆಗೆ “ಬಿನಾಕಾ ಗೀತಮಾಲಾ” ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಮುಖರಾದ ವಾಲ್ಟರ್ ನಂದಳಿಕೆ, ಎಂ ಗೋವರ್ಧನ ಶೆಟ್ಟಿ, ಗಿರಿಧರ್ ಪ್ರಭು, ಡಾ.ಕುಂಬಳೆ ಅನಂತ್ ಪ್ರಭು, ಡಾ.ಕೃಷ್ಣ ಪ್ರಸಾದ್ ಕೂಡ್ಲು, ಡಾ.ಕೆ.ಮೋಹನ್ ಪೈ, ರಾಘವೇಂದ್ರ ಕುಡ್ವ. ಹಾಗೂಕುಂಬ್ಳೆ ವಿಘ್ನೇಶ್ ಪ್ರಭು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕ ಹಾಗೂ ರೇಡಿಯೋ ಘೋಷಕರಾದ ಅಮೀನ್ ಸಯಾನಿ ಅವರಿಗೆ ವಿಶೇಷ ನಮನ ಸಲ್ಲಿಸಲಾಗುವುದು. 1954ರಿಂದ 1979ರವರೆಗಿನ ಜನಪ್ರಿಯ “ಬಿನಾಕಾ ಗೀತಮಾಲಾ” ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದರು.
“ಎಟರ್ನಲ್ ವಾಯ್ಸ್ ಆಫ್ ಡಾಕ್ಟರ್ಸ್ ವರ್ಲ್ಡ್ವೈಡ್” ಸ್ಪರ್ಧೆಯ ವಿಜೇತರಾದ ಡಾ. ಕುಂಬ್ಳೆ ಅನಂತ ಪ್ರಭು ಹಾಗೂ ಮಾಲಿನಿ ಕೇಶವ್ ಪ್ರಸಾದ್ ಪ್ರಮುಖ ಗಾಯಕ-ಗಾಯಕಿಯರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಿರೂಪಣೆಯನ್ನುಕುಂಬ್ಳೆ ನರಸಿಂಹ ಪ್ರಭು ನಿರ್ವಹಿಸಲಿದ್ದು, ಮುರಳೀಧರ್ ಕಾಮತ್ ಮತ್ತು ತಂಡದಿಂದ ನೇರ ಸಂಗೀತ ವಾದ್ಯಗೋಷ್ಠಿ ಇರಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲ/ ಎಂ. ರಾಜೇಶ್ ಹಾಗೂ ಪ್ರಮುಖರಾದ ಲ/ ವೆಂಕಟೇಶ್ ಬಾಳಿಗಾ ಉಪಸ್ಥಿತರಿದ್ದರು.