ಕೊಲ್ಲೂರಿನಲ್ಲಿ ‘ವರಾಹ ಮಿಹಿರನ್’ ಕಥಕ್ಕಳಿ ಪ್ರದರ್ಶನ ಜೂನ್‌ 10ರಂದು

ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂದಿರದಲ್ಲಿ ಜೂನ್‌ 10ರಂದು “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಚೇತಲ್ಲೂರ್ ವಿಜಯಕುಮಾರ್ ಗುಪ್ತನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಕಥಕ್ಕಳಿ ಕಲಾವಿದರು ಭಾಗವಹಿಸಲಿದ್ದು, ಪೌರಾಣಿಕ ಖಗೋಳಶಾಸ್ತ್ರಜ್ಞ ಹಾಗೂ ಜ್ಯೋತಿಷಿ ವರಾಹಮಿಹಿರರ ಜೀವನ ಮತ್ತು ಭವಿಷ್ಯವಾಣಿಯನ್ನು ಆಧರಿಸಿದ ದೃಶ್ಯಮಯ ನಿರೂಪಣೆ ಪ್ರದರ್ಶಿಸಲಿದ್ದಾರೆ ಎಂದರು.

“ವರಾಹ ಮಿಹಿರನ್” ಕಥಕ್ಕಳಿಯ ಕಥಾವಸ್ತು ಉಜ್ಜಯಿನಿ ಸಾಮ್ರಾಜ್ಯದ ಚಕ್ರವರ್ತಿ ವಿಕ್ರಮಾದಿತ್ಯನ ಪುತ್ರನ ಜನ್ಮಜಾತಕ ಮತ್ತು ಅದರ ಆಧಾರದ ಮೇಲೆ ಆಚಾರ್ಯ ವರಾಹಮಿಹಿರರು ಮಾಡಿದ ಭವಿಷ್ಯವಾಣಿಯ ಸುತ್ತ ಹೆಣೆದಿದೆ.

ಈ ನಾಟಕದ ಚಿತ್ರಕಥೆಯನ್ನು ವಾಮನನ್ ನಂಬೂದಿರಿ ರಚಿಸಿದ್ದು, ಕಲಾಮಂಡಲಂ ಕೇಶವನ್ ನಂಬೂದಿರಿ ನಿರ್ದೇಶನ ಮಾಡಿದ್ದಾರೆ. ಸಮಗ್ರ ಪರಿಕಲ್ಪನೆ, ನಿರ್ಮಾಣ ವಿನ್ಯಾಸ ಮತ್ತು ನಿರೂಪಣಾ ಸಂಕಲನವನ್ನು ಪಾಲಕ್ಕಾಡಿನ ಚೇತಲ್ಲೂರು ಜ್ಯೋತಿಷ ಕಲಾಲಯದ ವಿಜಯಕುಮಾರ್ ಗುಪ್ತನ್ ರೂಪಿಸಿದ್ದಾರೆ.

ಜೂನ್‌ 10ರಂದು ನಡೆಯುವ ಪ್ರದರ್ಶನವು ಈ ಕಾರ್ಯಕ್ರಮದ ಏಳನೇ ಪ್ರದರ್ಶನವಾಗಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಮೆಚ್ಚುಗೆ ಪಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಯಕೃಷ್ಣನ್ ವಾರಿಯರ್, ತೇಜಸ್ ನಂಬೂದಿರಿ ಹಾಗೂ ಅರವಿಂದ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!