ರಾಜ್ಯದ 9 ನಗರಗಳ ಮಕ್ಕಳ ಬೇಸಿಗೆ ಶಿಬಿರಗಳ ಸಮಾಪನ “ಜಂಬೂರಿ” ಸಂಪನ್ನ

ಮಂಗಳೂರು, ಕಟಪಾಡಿ, ಉಡುಪಿ-ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಗಂಗೊಳ್ಳಿ, ಮೈಸೂರು, ಉಳ್ಳಾಲ, ಪುತ್ತೂರು ಸೇರಿದಂತೆ ರಾಜ್ಯದ ಒಂಭತ್ತು ನಗರಗಳಲ್ಲಿ ನಡೆದ ಬೇಸಿಗೆ ಶಿಬಿರದ ಸಮಾಪನ “ಜಂಬೂರಿ” ಮಂಗಳೂರಿನಲ್ಲಿ ಮಕ್ಕಳ ಖುಷಿ, ಸಂಭ್ರಮದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಆಯಾ ಊರುಗಳಲ್ಲಿ ಒಟ್ಟು ಆರು ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಶಿಬಿರದ ಕೊನೆಯ ಏಳನೇಯ ದಿನ ಎಲ್ಲಾ ಊರುಗಳ ಮಕ್ಕಳು ಒಂದೇ ಕಡೆಯಲ್ಲಿ ಸೇರುವ ವ್ಯವಸ್ಥೆ ಮಾಡಲಾಗಿತ್ತು.

ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್ ಆವರಣದಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಮಕ್ಕಳಿಗೆ ಭಗವತ್ ಗೀತಾ ಕಂಠಪಾಠ ಸ್ಪರ್ಧೆ, ಭಜನಾ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಕಥೆ ಬರೆಯುವ ಸ್ಪರ್ಧೆ, ಸಂಗೀತ ವಾದ್ಯ ನುಡಿಸುವ ಸ್ಪರ್ಧೆ, ಯೋಗಾಸನ ಸ್ಪರ್ಧೆ, ಕೋಲಾಜ್ ಚಿತ್ರ ಸ್ಪರ್ಧೆ, ಸ್ಥಳದಲ್ಲಿಯೇ ಚೀಟಿ ತೆಗೆದು ಆಯ್ದ ವಿಷಯಗಳ ಬಗ್ಗೆ ಮಾತನಾಡುವ ಸ್ಪರ್ಧೆ, ಕೊಂಕಣಿ ಹಾಗೂ ಸಂಸ್ಕೃತದಲ್ಲಿ ಭಾಷಣ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ, ರಸಪ್ರಶ್ನೆಯ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗೆ ವಿವಿಧ ಆಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ಇನ್ನೂರ ಐವತ್ತರಷ್ಟು ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.

ಸಮಗ್ರ ಪ್ರಶಸ್ತಿಯನ್ನು ಬ್ರಹ್ಮಾವರ ತಂಡ ಗೆದ್ದುಕೊಂಡರೆ, ನಾಟಕ ಸ್ಪರ್ಧೆಯಲ್ಲಿ ಮೈಸೂರು ತಂಡ ವಿಜಯಮಾಲೆ ಧರಿಸಿತು. ಎಲ್ಲಾ ಮಕ್ಕಳಿಗೆ ವಿವಿಧ ಬಣ್ಣದ ಸಮವಸ್ತ್ರ ಹಾಗೂ ಕ್ಯಾಪ್ ನೀಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಖ್ಯಾತ ಮಕ್ಕಳ ತಜ್ಞ ಡಾ. ಕಿರಣ್ ಬಾಳಿಗಾ, ದಂತ ವೈದ್ಯೆ ಡಾ. ಅನುಪಮಾ ಬಾಳಿಗಾ, ಸಿಎ ಗೌತಮ್ ಪೈ ಬಹುಮಾನಗಳನ್ನು ವಿತರಿಸಿ, ಮಕ್ಕಳಿಗೆ ಶುಭ ಹಾರೈಸಿದರು.

ಐದನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗಿನ ಮಕ್ಕಳಿಗಾಗಿಯೇ ಆಯೋಜಿಸಿದ್ದ ಈ ಬೇಸಿಗೆ ಶಿಬಿರವನ್ನು ಯೂತ್ ಆಫ್ ಜಿಎಸ್ ಬಿ ಸಂಘಟಿಸಿತ್ತು. ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಸಿಎ ಗಿರಿಧರ್ ಕಾಮತ್, ಗುರು ಬಂಟ್ವಾಳಾಕರ್, ಸಹನಾ ಕಿಣಿ ಹಾಗೂ ಯೂತ್ ಆಫ್ ಜಿಎಸ್ ಬಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!