ವಿದೇಶಿ ಪ್ರಜೆಗಳೇ ಹೆಚ್ಚು ಬಲಿ: ದೆಹಲಿ ಅಗ್ನಿ ಅವಘಡದ ಬೆಚ್ಚಿಬೀಳಿಸುವ ವಿವರ

ರಾಷ್ಟ್ರ ರಾಜಧಾನಿ ದೆಹಲಿಯ ದಕ್ಷಿಣ ಭಾಗದ ಮಾಳವೀಯ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮೃತರಲ್ಲಿ ಬಹುತೇಕರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದ ವಿದೇಶಿ ಪ್ರಜೆಗಳು ಎನ್ನಲಾಗಿದೆ.

ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ, ಬೆಳಿಗ್ಗೆ ಸುಮಾರು 8.50ರ ವೇಳೆಗೆ ಐದು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿದ್ದ ಮಿಕಾಸಾ ಇನ್ ಹಾಗೂ ಫ್ಲರಿಶ್ ಸ್ಟೇ ಹೋಟೆಲ್‌ಗಳ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಹೋಟೆಲ್‌ನ ಶೆಫ್ ಕೇಶರ್ ಸಿಂಗ್ ಅವರು ಎಲೆಕ್ಟ್ರಿಕ್ ಸ್ಟವ್ ಆನ್ ಮಾಡಲು ಮುಂದಾದ ವೇಳೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಜ್ವಾಲೆಗಳು ಇಡೀ ಕಟ್ಟಡವನ್ನು ಆವರಿಸಿವೆ. ಅವಘಡ ಸಂಭವಿಸಿದ ವೇಳೆ ಹೋಟೆಲ್‌ನಲ್ಲಿ 40ಕ್ಕೂ ಹೆಚ್ಚು ಅತಿಥಿಗಳು ತಂಗಿದ್ದರು. ಹೆಚ್ಚಿನವರು ನಿದ್ರೆಯಲ್ಲಿದ್ದ ಕಾರಣ ತಕ್ಷಣ ಹೊರಬರಲು ಸಾಧ್ಯವಾಗಿಲ್ಲ.

ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಕೆಲವರು ಪ್ರಾಣ ಉಳಿಸಿಕೊಳ್ಳಲು ಕಿಟಕಿಗಳಿಂದ ಕೆಳಗೆ ಜಿಗಿದಿದ್ದಾರೆ. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳವು ಎರಡು ವಾಟರ್ ಇಂಜಿನ್‌ಗಳು, ಎರಡು ವಾಟರ್ ಬೌಸರ್‌ಗಳು ಹಾಗೂ ತ್ವರಿತ ಸ್ಪಂದನಾ ವಾಹನ ಸೇರಿದಂತೆ ಹಲವು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿತು. ಸತತ ಕಾರ್ಯಾಚರಣೆ ನಡೆಸಿ 35ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದೀಗ ದುರಂತದ ಹಿಂದಿನ ಕಾರಣಗಳ ಕುರಿತು ತನಿಖೆ ಆರಂಭವಾಗಿದ್ದು, ಕಟ್ಟಡ ನಿರ್ಮಾಣದಲ್ಲಿ ಭಾರೀ ಪ್ರಮಾಣದ ನಿಯಮ ಉಲ್ಲಂಘನೆ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ. ಐದು ಅಂತಸ್ತಿನ ಕಟ್ಟಡದಲ್ಲಿ ಕೇವಲ ಆರು ಕೊಠಡಿಗಳಿಗೆ ಮಾತ್ರ ಅನುಮತಿ ಇದ್ದರೂ, ನಿಯಮ ಮೀರಿ ಸುಮಾರು 25 ಕೊಠಡಿಗಳನ್ನು ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದಲ್ಲದೆ, ಕಟ್ಟಡದಲ್ಲಿ ತುರ್ತು ನಿರ್ಗಮನ ವ್ಯವಸ್ಥೆಯೂ ಇರಲಿಲ್ಲ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮೆಟ್ಟಿಲುಗಳ ಮೂಲಕ ಮಾತ್ರ ಹೊರಬರಬೇಕಾದ ಅನಿವಾರ್ಯತೆ ಉಂಟಾಗಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ದುರಂತದ ನಿಖರ ಕಾರಣ ಪತ್ತೆಗಾಗಿ ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!