ಮೀನುಗಾರಿಕೆ ನಿಷೇಧ: ಎರಡು ತಿಂಗಳ ಮೌನಕ್ಕೆ ಜಾರಿದ ಮಂಗಳೂರು ಬಂದರು

ಮಂಗಳೂರು, ಜೂನ್ 9: ಸೂರ್ಯ ಉದಯಿಸುವುದಕ್ಕೂ ಮುನ್ನವೇ ಹರಾಜಿನ ಕೂಗು, ಬೋಟ್‌ಗಳ ಎಂಜಿನ್‌ಗಳ ಸದ್ದು, ವಾಹನಗಳ ದಟ್ಟಣೆ ಮತ್ತು ಕಾರ್ಮಿಕರ ಓಡಾಟದಿಂದ ಕಿಕ್ಕಿರಿದು ಕಾಣುತ್ತಿದ್ದ ಮಂಗಳೂರು ಮೀನುಗಾರಿಕಾ ಬಂದರು ಇದೀಗ ಎರಡು ತಿಂಗಳ ಮೌನಕ್ಕೆ ಜಾರಿದೆ. ವಾರ್ಷಿಕ ಮೀನುಗಾರಿಕೆ ಋತು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಬಂದರಿನ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜೆಟ್ಟಿ ಪ್ರದೇಶ ನೀರವ ನಿಶ್ಶಬ್ದಕ್ಕೆ ಸಾಕ್ಷಿಯಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳ ಕಾಲ ಯಾಂತ್ರೀಕೃತ ಹಾಗೂ ಟ್ರಾಲ್ ಬೋಟ್‌ಗಳ ಮೀನುಗಾರಿಕೆಗೆ ನಿಷೇಧ ಜಾರಿಯಲ್ಲಿದೆ. ಸಮುದ್ರದ ಪರಿಸರ ಸಮತೋಲನ ಕಾಪಾಡುವ ಹಾಗೂ ಮೀನುಗಳ ಸಂತಾನೋತ್ಪತ್ತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿವರ್ಷ ಈ ನಿರ್ಬಂಧ ಜಾರಿಗೊಳ್ಳುತ್ತದೆ.

ಸಾಮಾನ್ಯ ದಿನಗಳಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದ ದಕ್ಕೆ ಪ್ರವೇಶದ ರಸ್ತೆಗಳು ಈಗ ಖಾಲಿ ಖಾಲಿಯಾಗಿ ಕಾಣುತ್ತಿವೆ. ಮೀನು ಸಾಗಾಟದ ಟೆಂಪೋ, ಲಾರಿಗಳು, ಆಟೋಗಳು ಹಾಗೂ ದ್ವಿಚಕ್ರ ವಾಹನಗಳ ಓಡಾಟ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಚಹಾ ಮತ್ತು ತಿಂಡಿ ಅಂಗಡಿಗಳೂ ಗ್ರಾಹಕರಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ.

ಪ್ರಸ್ತುತ ಬಂದರಿನಲ್ಲಿ ಬೋಟ್‌ಗಳಿಂದ ಮೀನು ಸಂಗ್ರಹಿಸುವ ಬಾಕ್ಸ್‌ಗಳನ್ನು ತೆರವುಗೊಳಿಸಿ ದಕ್ಕೆಯಲ್ಲಿ ಜೋಡಿಸಿಡುವ ಕೆಲಸ ಮಾತ್ರ ನಡೆಯುತ್ತಿದೆ. ನೂರಾರು ಬೋಟ್‌ಗಳು ಜೆಟ್ಟಿಯಲ್ಲಿ ಲಂಗರು ಹಾಕಿದ್ದು, ಮೊದಲ ಹಾಗೂ ಎರಡನೇ ಹಂತಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಕೆಲವು ಬೋಟ್‌ಗಳನ್ನು ಮೂರನೇ ಹಂತ, ಬೆಂಗ್ರೆ, ಬತ್ತೇರಿ ಹಾಗೂ ಕೂಳೂರು ಭಾಗಗಳಲ್ಲಿಯೂ ನಿಲ್ಲಿಸಲಾಗಿದೆ.

ಮೀನುಗಾರಿಕೆ ವಿರಾಮದ ಈ ಅವಧಿಯನ್ನು ಬೋಟ್ ಮಾಲೀಕರು ದುರಸ್ತಿ, ಬಣ್ಣ ಬಳಿಯುವುದು ಮತ್ತು ನಿರ್ವಹಣಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ಮೀನುಗಾರಿಕಾ ಋತುವಿಗೆ ಸಜ್ಜಾಗುವ ನಿಟ್ಟಿನಲ್ಲಿ ದೋಣಿಗಳ ದುರಸ್ತಿ ಕಾರ್ಯಗಳು ಭರದಿಂದ ಸಾಗುತ್ತಿವೆ.

ಇನ್ನು ಕರಾವಳಿಯಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿರುವ ಕಾರಣ ಸ್ಥಳೀಯ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಮೀನುಗಳು ಆಗಮಿಸುತ್ತಿವೆ. ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಐಸ್‌ನಲ್ಲಿ ಸಂಗ್ರಹಿಸಿ ತರಲಾಗುವ ಮೀನುಗಳು ತಾಜಾತನ ಕಳೆದುಕೊಂಡಿರುವುದರ ಜೊತೆಗೆ ದರವೂ ಹೆಚ್ಚಿರುತ್ತದೆ ಎಂದು ವ್ಯಾಪಾರಿಗಳು ಹಾಗೂ ಗ್ರಾಹಕರು ಹೇಳುತ್ತಾರೆ.

ಮಳೆಗಾಲ ಆರಂಭವಾದ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಲಿದೆಯಾದರೂ, ಅದರ ಮೂಲಕ ದೊರೆಯುವ ಮೀನು ಪ್ರಮಾಣ ಕಡಿಮೆಯಿರುತ್ತದೆ. ಸಿಗುವ ಮೀನುಗಳೂ ಹೆಚ್ಚಾಗಿ ಸ್ಥಳೀಯ ಮಟ್ಟದಲ್ಲೇ ಮಾರಾಟವಾಗುವುದರಿಂದ ಮಾರುಕಟ್ಟೆಗೆ ಬರುವ ಪ್ರಮಾಣವೂ ಸೀಮಿತವಾಗಿರುತ್ತದೆ ಎಂದು ಮೀನುಗಾರರು ಅಭಿಪ್ರಾಯಪಡುತ್ತಾರೆ.

ಮಂಗಳೂರು ಮೀನುಗಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದಾರೆ. ಜಾರ್ಖಂಡ್, ಬಿಹಾರ, ಒಡಿಶಾ, ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಂದ ಆಗಮಿಸಿರುವ ಸಾವಿರಾರು ಕಾರ್ಮಿಕರು ಬೋಟ್‌ಗಳಲ್ಲಿ ಮೀನುಗಾರಿಕೆ, ಲೋಡಿಂಗ್-ಅನ್‌ಲೋಡಿಂಗ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಅವರು ತಮ್ಮ ಊರುಗಳಿಗೆ ತೆರಳಿದ್ದು, ಎರಡು ತಿಂಗಳ ಬಳಿಕ ಮತ್ತೆ ಕರಾವಳಿಗೆ ಮರಳಲಿದ್ದಾರೆ.

ಮೀನುಗಾರಿಕೆ ಸ್ಥಗಿತದಿಂದ ಮೀನುಗಾರರು ಮಾತ್ರವಲ್ಲದೆ ಐಸ್ ಫ್ಯಾಕ್ಟರಿ ಸಿಬ್ಬಂದಿ, ಮೀನು ಸಾಗಾಟ ವಾಹನ ಚಾಲಕರು, ಮೀನು ಸಂಸ್ಕರಣಾ ಘಟಕಗಳ ಕಾರ್ಮಿಕರು ಸೇರಿದಂತೆ ಮೀನುಗಾರಿಕೆ ಕ್ಷೇತ್ರವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ತಾತ್ಕಾಲಿಕವಾಗಿ ಪರ್ಯಾಯ ಉದ್ಯೋಗದತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ, ವರ್ಷಪೂರ್ತಿ ಚಟುವಟಿಕೆಯಿಂದ ಕಂಗೊಳಿಸುವ ಮಂಗಳೂರು ಮೀನುಗಾರಿಕಾ ಬಂದರು ಇದೀಗ ಎರಡು ತಿಂಗಳ ವಿರಾಮ ಪಡೆದು ಮೌನಕ್ಕೆ ಜಾರಿದ್ದು, ಆಗಸ್ಟ್ ತಿಂಗಳಲ್ಲಿ ಮತ್ತೆ ಸಮುದ್ರಯಾನದ ಸಂಭ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!