ಹನಿಟ್ರ್ಯಾಪ್‌ ಜಾಲ ಬಯಲು: ಉದ್ಯಮಿಯಿಂದ ₹2.77 ಕೋಟಿ ವಸೂಲಿ ಆರೋಪ

ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ; ಆತ್ಮಹತ್ಯೆ ನಾಟಕವಾಡಿ ಹಣ ದೋಚಿದ ಆರೋಪ

ಮಂಗಳೂರು, ಜೂನ್ 9: ಮಂಗಳೂರಿನ ಖ್ಯಾತ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ, ಅಶ್ಲೀಲ ವಿಡಿಯೊಗಳು ಮತ್ತು ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ₹2.77 ಕೋಟಿ ಹಣ ವಸೂಲಿ ಮಾಡಿದ ಆರೋಪದಡಿ ಉರ್ವಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಆತನ ಸ್ನೇಹಿತ ಜಿತೇಶ್ ಎಂದು ಗುರುತಿಸಲಾಗಿದೆ. 2024ರಿಂದ 2026ರ ಅವಧಿಯಲ್ಲಿ ವಿವಿಧ ರೀತಿಯ ಬೆದರಿಕೆ, ಬ್ಲ್ಯಾಕ್‌ಮೇಲ್ ಹಾಗೂ ಸುಳ್ಳು ನಾಟಕಗಳ ಮೂಲಕ ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿರುವುದಾಗಿ ಆರೋಪಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಜಿತೇಶ್ ಉದ್ಯಮಿಯೊಂದಿಗೆ ಆಪ್ತ ಪರಿಚಯ ಬೆಳೆಸಿಕೊಂಡು, ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೊಗಳನ್ನು ಗುಪ್ತವಾಗಿ ಸಂಗ್ರಹಿಸಿದ್ದ ಎನ್ನಲಾಗಿದೆ. ಬಳಿಕ ಆ ದೃಶ್ಯಗಳನ್ನು ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕರ ಮುಂದೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಲಾಗಿದೆ.

ಸಾಮಾಜಿಕ ಮರ್ಯಾದೆಗೆ ಧಕ್ಕೆಯಾಗುವ ಭೀತಿಯಿಂದ ಉದ್ಯಮಿ ಆರಂಭದಲ್ಲಿ ಜಿತೇಶ್‌ಗೆ ಸುಮಾರು ₹35 ಲಕ್ಷ ಹಣವನ್ನು ಚೆಕ್ ಮೂಲಕ ನೀಡಿದ್ದರು ಎನ್ನಲಾಗಿದೆ. ಆದರೆ ಹಣದ ಬೇಡಿಕೆ ನಿರಂತರವಾಗಿ ಮುಂದುವರಿದ ಹಿನ್ನೆಲೆಯಲ್ಲಿ, ಪರಿಚಯಸ್ಥನಾಗಿದ್ದ ನಿಝಾಮ್‌ನ ನೆರವು ಕೋರಿದ್ದರು. ಆದರೆ ನಿಝಾಮ್ ಕೂಡ ಜಿತೇಶ್ ಜೊತೆ ಸೇರಿಕೊಂಡು ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡುವಂತೆ, ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕಟ್ಟುಕಥೆಯನ್ನು ಆರೋಪಿಗಳು ಸೃಷ್ಟಿಸಿದ್ದರೆಂದು ಹೇಳಲಾಗಿದೆ. ಆತ್ಮಹತ್ಯೆ ದೃಶ್ಯದಂತೆ ಕಾಣುವ ಫೋಟೋಗಳು ಹಾಗೂ ಅಂತ್ಯಸಂಸ್ಕಾರದ ಚಿತ್ರಗಳನ್ನು ಉದ್ಯಮಿಗೆ ತೋರಿಸಿ, ಜಿತೇಶ್ ಬರೆದಿದ್ದಾನೆ ಎನ್ನಲಾದ ಡೆತ್‌ನೋಟ್ ಹೊರಬಂದರೆ ಕಾನೂನು ಸಂಕಷ್ಟ ಎದುರಾಗಬಹುದು ಎಂದು ನಂಬಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಜಿತೇಶ್ ಮೃತಪಟ್ಟಿದ್ದಾನೆ ಎಂಬ ನಂಬಿಕೆಯಲ್ಲಿ ಹಾಗೂ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗುವ ಭೀತಿಯಿಂದ ಉದ್ಯಮಿ ನಿರಂತರವಾಗಿ ಹಣ ನೀಡುತ್ತಾ ಬಂದಿದ್ದು, 2024ರಿಂದ 2026ರ ನಡುವೆ ಒಟ್ಟು ₹2.77 ಕೋಟಿ ರೂಪಾಯಿ ಆರೋಪಿಗಳ ಕೈ ಸೇರಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆದರೆ ಇತ್ತೀಚೆಗೆ ಜೂನ್ ತಿಂಗಳ ಆರಂಭದಲ್ಲಿ ಜಿತೇಶ್ ಮಂಗಳೂರಿನಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿ ತಕ್ಷಣ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಉರ್ವಾ ಪೊಲೀಸರು ನಿಝಾಮ್ ಮತ್ತು ಜಿತೇಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಣ ವರ್ಗಾವಣೆ ದಾಖಲೆಗಳು ಸೇರಿದಂತೆ ಹಲವು ಅಂಶಗಳ ಕುರಿತು ತನಿಖೆ ಮುಂದುವರಿದಿದೆ.

ಇದೇ ವೇಳೆ ಬಂಧಿತ ನಿಝಾಮ್ ರಾಜ್ಯದ ಹಲವು ಕಾಂಗ್ರೆಸ್ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!