ಬಂಟ್ವಾಳ: ಪ.ಜಾತಿ, ಪಂಗಡ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ

ಬಂಟ್ವಾಳ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಎಸ್.ಜೆ.ಎಸ್.ವೈ.ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್, ನಾನಾ ಇಲಾಖೆಗಳ ಅಧಿಕಾರಿಗಳು, ಪ.ಜಾತಿ, ಪ.ಪಂ ಮುಖಂಡರು ಉಪಸ್ಥಿತರಿದ್ದು, ನಾನಾ ವಿಷಯಗಳ ಕುರಿತು ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.


ಪರಿಶಿಷ್ಟ ಜಾತಿ, ವರ್ಗದವರ ಪ್ರಗತಿ ಕಾಲನಿ ಯೋಜನೆಯ ಅನುದಾನವು ಸರಿಯಾಗಿ ವಿನಿಯೋಗವಾಗುತ್ತಿಲ್ಲ, ಪ.ಜಾತಿ, ವರ್ಗದ ಜನರು ವಾಸಿಸದಿರುವ ಪ್ರದೇಶದಲ್ಲಿಯೂ ಈ ಯೋಜನೆ ಕೈಗೆತ್ತಿಕೊಳ್ಳಲಾಗಿರುವ ಕುರಿತು ಮಹಾಲಿಂಗ ನಾಯ್ಕ ಪುಣಚ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಪರಿಶಿಷ್ಟ ಜಾತಿ, ಪಂಗಡಕ್ಕೆಂದು ಮೀಸಲಿರಿಸಲಾದ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ, ವೈಯಕ್ತಿಕ ಫಲಾನುಭವಿಗಳಿಗೆ ನೀಡಲು ಅವಕಾಶವಿದೆ ಎಂದರು.
ಬಂಟ್ವಾಳ ಬಡ್ಡಕಟ್ಟೆ ಸ್ಮಶಾನ ಅಭಿವೃದ್ಧಿ ಕಾಮಗಾರಿ ಗುಣಮಟ್ಟದ ಕುರಿತು ಸಂಶಯ ವ್ಯಕ್ತಪಡಿಸಿದ ಮೋಹನ್ ಚಂಡ್ತಿಮಾರ್, ಇದರ ಗುಣಮಟ್ಟದ ಕುರಿತು ಪರಿಶೀಲನೆಯಾಗಬೇಕು ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರಿಗೆ ತಿಳಿಸಿದರು. ಈ ಸಂದರ್ಭ ನನಗೆ ಇದರ ಕುರಿತು ಮಾಹಿತಿ ಇಲ್ಲ ಎಂದ ಮುಖ್ಯಾಧಿಕಾರಿ, ಈ ಕುರಿತು ಗಮನಹರಿಸುವೆ ಎಂದರು.


ಪುರಸಭೆಗೆ ಎಷ್ಟು ಅನುದಾನ ಬಂದಿದೆ, ಎಷ್ಟು ಖರ್ಚು ಮಾಡಿದ್ದೀರಿ ಎಂಬ ಕುರಿತು ಸಮರ್ಪಕ ಮಾಹಿತಿ ಮುಖ್ಯಾಧಿಕಾರಿ ಬಳಿ ಇದೆಯೇ ಎಂದು ಗಂಗಾಧರ ಪರಾರಿ ಪ್ರಶ್ನಿಸಿ, ನೀರು ವಿತರಣೆಯ ಸಮಸ್ಯೆಗಳನ್ನು ವಿವರಿಸಿದರು. ಮುಖ್ಯಾಧಿಕಾರಿಗಳಿಗೆ ಗೊತ್ತಿಲ್ಲದಂತೆ ಕೆಲಸವಾಗುತ್ತಿರುವುದು ಆತಂಕಕಾರಿ ಎಂದು ಗಂಗಾಧರ ಹೇಳಿದರು
ಈ ಸಂದರ್ಭ ಗಮನ ಸೆಳೆದ ಮುಖಂಡ ಗಿರಿಧರ ನಾಯ್ಕ್, ಪುಣಚದ ಮೂವರು ಫಲಾನುಭವಿಗಳಿಗೆ ಹಕ್ಕುಪತ್ರ ಪಡೆಯಲು ನಡೆಸಿದ ಹೋರಾಟಗಳನ್ನು ನೆನಪಿಸಿ, ತಹಸೀಲ್ದಾರ್ ಅವರು ಹಕ್ಕುಪತ್ರ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲು ಕೋರಿದರು. ಮೂರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕುರಿತು ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ಹಕ್ಕುಪತ್ರಗಳು ಸಿದ್ಧವಾಗಿದೆ. ಸರಕಾರದ ಸುತ್ತೋಲೆ ಪ್ರಕಾರ, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಅವರ ಕೈಯಲ್ಲಿ ಕೊಡುವ ಪ್ರಕ್ರಿಯೆ ನಡೆಯಬೇಕಿದೆ. ಮುಂದಿನ ಅಕ್ರಮ, ಸಕ್ರಮ ಸಭೆಯಲ್ಲಿ ಕರೆದು ಕೊಡುತ್ತೇವೆ ಎಂದು ಅವರು ತಿಳಿಸಿದ್ದಾರೆ ಎಂದು ತಹಸೀಲ್ದಾರ್ ಮಂಜುನಾಥ್ ಈ ವೇಳೆ ಹೇಳಿದರು.
ಆರ್.ಟಿ.ಒ., ಸಂಚಾರಿ ಪೊಲೀಸರು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಿಗೆ ಒಂದು ನೀತಿ, ಇತರ ಬಸ್ಸು, ವಾಹನಗಳಿಗೆ ಮತ್ತೊಂದು ರೀತಿ ಮಾಡುವುದು ಏಕೆ, ಮಿತಿಮೀರಿ ಜನರನ್ನು ಹೇರಿಕೊಂಡು ಹೋಗುವ ಕೆಎಸ್ಸಾರ್ಟಿಸಿ ಬಸ್ಸುಗಳ ವಿರುದ್ಧ ಕ್ರಮ ಯಾಕೆ ಇಲ್ಲ ಎಂದು ವಿಶ್ವನಾಥ ಚಂಡ್ತಿಮಾರ್ ಪ್ರಶ್ನಿಸಿದರು ಪ.ಜಾತಿ, ಪಂಗಡದ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ಸತೀಶ್ ಅರಳ, ಪೊಲೀಸ್ ಇಲಾಖೆ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!