ಬಂಟ್ವಾಳ, ಜೂ.12: ಮುಕ್ರಂಪಾಡಿಯ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತೃತೀಯ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮತಿ ಪ್ರತಿಭಾ ಓಕುಣ್ಣಾಯ ಬೊಳ್ಳಿಂಬಳ ಹಾಗೂ ಶ್ರೀಮತಿ ರಜತಾ ಭಟ್ ಮುಕ್ರಂಪಾಡಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ವೀಣಾ ಬಲ್ಲಾಳ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಪವಿತ್ರಾ ದೊಡ್ಡಡ್ಕ ಮತ್ತು ಶ್ರೀಮತಿ ಸ್ವಯಂಪ್ರಭಾ ಅವರನ್ನು ನೇಮಕ ಮಾಡಲಾಯಿತು.
ಬರುವ ಆಗಸ್ಟ್ 28, 2026ರಂದು ಮುಕ್ರಂಪಾಡಿಯ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿ, ಶ್ರದ್ಧೆ ಮತ್ತು ವೈಭವದಿಂದ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಬಾರಿ ಹತ್ತು ಸಾವಿರಕ್ಕೂ ಅಧಿಕ ಪೂಜಾ ಸೇವೆಗಳನ್ನು ನಡೆಸಿ, ಪ್ರತಿಯೊಬ್ಬ ಸೇವಾ ಕರ್ತರಿಗೆ ಪ್ರಸಾದ ರೂಪದಲ್ಲಿ ಸೀರೆ, ರವಿಕೆ ಕಣ, ಬಳೆ, ಅರಿಶಿನ-ಕುಂಕುಮ ನೀಡುವುದರ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಿರ್ಧರಿಸಲಾಯಿತು.
ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಗೌರವ ಸಲಹೆಗಾರರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಅಲಂಕಾರ ಸಮಿತಿ ಹಾಗೂ ಅನ್ನಸಂತರ್ಪಣಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಲ್ಲದೆ ತಾಲೂಕಿನ ಎಲ್ಲಾ ಬೂತುಗಳ ಟ್ರಸ್ಟ್ಗಳ ಮಹಿಳಾ ಸಮಿತಿಯ ತಾಯಂದಿರನ್ನು ಸದಸ್ಯರಾಗಿ ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು.
ಟ್ರಸ್ಟ್ನ ಸಂಚಾಲಕರು, ಅಧ್ಯಕ್ಷರು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಸಭೆಗೆ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.