ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ಔಷಧ ವಿಭಾಗದ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ, ಜೂನ್ 12: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥರಾಗಿರುವ ಚಂದ್ರಶೇಖರ್ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿಯ ದೂರಿನ ಆಧಾರದಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕೆದ್ದು ನಿವಾಸಿಯಾಗಿರುವ ಚಂದ್ರಶೇಖರ್ ಅವರು ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಶೇಖರ್ ವಿರುದ್ಧ ಈ ಹಿಂದೆ ಆಸ್ಪತ್ರೆಯ ಔಷಧ ಹಾಗೂ ವೈದ್ಯಕೀಯ ಸಾಮಗ್ರಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಆರೋಪಗಳು ಕೇಳಿಬಂದಿದ್ದವು ಎಂದು ಸ್ಥಳೀಯ ವಲಯಗಳಲ್ಲಿ ಚರ್ಚೆಯಾಗುತ್ತಿದ್ದು, ಈ ಕುರಿತು ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಇದಲ್ಲದೆ, ಮಹಿಳೆಯರು ಹಾಗೂ ಯುವತಿಯರಿಗೆ ಕಿರುಕುಳ ನೀಡಿದ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದವು ಎಂಬ ಮಾತುಗಳು ಹರಿದಾಡುತ್ತಿದ್ದು, ಪ್ರಸ್ತುತ ಪ್ರಕರಣದಲ್ಲಿ ಸಿಬ್ಬಂದಿಯೊಬ್ಬರು ಕುಟುಂಬ ಸದಸ್ಯರ ಗಮನಕ್ಕೆ ವಿಷಯ ತಂದು ಪೊಲೀಸ್ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!