ಜಾಗತಿಕ ಸವಾಲುಗಳ ನಡುವೆಯೂ ಭಾರತ 7.7% ಆರ್ಥಿಕ ಬೆಳವಣಿಗೆ ಸಾಧನೆ: ರಾಧಾ ಮೋಹನ್ ದಾಸ್ ಅಗರ್ವಾಲ್

ಮಂಗಳೂರು, ಜೂನ್ 13: ಜಾಗತಿಕ ಆರ್ಥಿಕ ಹಿಂಜರಿತ, ಇಂಧನ ಬಿಕ್ಕಟ್ಟು ಹಾಗೂ ವಿವಿಧ ಅಂತರರಾಷ್ಟ್ರೀಯ ಸಂಘರ್ಷಗಳ ನಡುವೆಯೂ ಭಾರತವು ಶೇ.7.7ರ ಆರ್ಥಿಕ ಬೆಳವಣಿಗೆ ದರ ಸಾಧಿಸಿದ್ದು, ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14ರಲ್ಲಿ 1.9 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದ ಭಾರತ ಇಂದು 4.1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆದಿದೆ. ಭಾರತದ ಬೆಳವಣಿಗೆ ದರವು ಅಮೆರಿಕದ ಶೇ.2.6, ಚೀನಾದ ಶೇ.4.4 ಹಾಗೂ ಜಪಾನ್‌ನ ಶೇ.0.7ಕ್ಕಿಂತ ಹೆಚ್ಚಿದ್ದು, ಇದೇ ಬೆಳವಣಿಗೆ ಮುಂದುವರಿದರೆ 2031ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 12 ವರ್ಷಗಳಲ್ಲಿ ದೇಶದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದು, ನಿರುದ್ಯೋಗ ದರ ಶೇ.5.1 ಹಾಗೂ ಹಣದುಬ್ಬರ ದರ ಶೇ.4.5ರ ಮಟ್ಟದಲ್ಲಿದೆ ಎಂದು ತಿಳಿಸಿದರು. ಇದೇ ಅವಧಿಯಲ್ಲಿ ತಲಾ ಆದಾಯವು 49 ಸಾವಿರ ರೂಪಾಯಿಯಿಂದ 2.35 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದರು.

ದೇಶದಲ್ಲಿ ಮೂಲಸೌಕರ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಅಭಿವೃದ್ಧಿ ಕಂಡುಬಂದಿದೆ. 4 ಕೋಟಿ ಮನೆಗಳು ಹಾಗೂ 12 ಕೋಟಿ ಶೌಚಾಲಯಗಳು ನಿರ್ಮಾಣಗೊಂಡಿದ್ದು, 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ದೇಶದ ಎಲ್ಲಾ ಹಳ್ಳಿಗಳು ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿ ಜನರಿಗೆ ತಲಾ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದ್ದು, 10.50 ಕೋಟಿ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ಹಾಗೂ ಸಿಲಿಂಡರ್ ಸಬ್ಸಿಡಿ ನೀಡಲಾಗಿದೆ ಎಂದು ವಿವರಿಸಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಗಣನೀಯ ವಿಸ್ತರಣೆ ಕಂಡುಬಂದಿದೆ. ಎಂ.ಬಿ.ಬಿ.ಎಸ್. ಸೀಟುಗಳ ಸಂಖ್ಯೆ 51,348ರಿಂದ 1,28,973ಕ್ಕೆ, ಎಂ.ಡಿ. ಸೀಟುಗಳು 31,185ರಿಂದ 85,822ಕ್ಕೆ ಹೆಚ್ಚಳವಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 790ಕ್ಕೆ ಏರಿಕೆಯಾಗಿದೆ. ಏಮ್ಸ್ ಸಂಸ್ಥೆಗಳು 6ರಿಂದ 23ಕ್ಕೆ, ಐಐಟಿ ಸಂಸ್ಥೆಗಳು 16ರಿಂದ 23ಕ್ಕೆ ಹಾಗೂ ವಿಶ್ವವಿದ್ಯಾಲಯಗಳ ಸಂಖ್ಯೆ 760ರಿಂದ 1,338ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕಕ್ಕೆ ₹4 ಲಕ್ಷ ಕೋಟಿ ಅನುದಾನ

2014ರಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 4,01,717 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ತಿಳಿಸಿದ ಅವರು, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ, ಬೆಂಗಳೂರು ರಿಂಗ್ ರಸ್ತೆ, ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ವೇ, ತುಮಕೂರು ಕೈಗಾರಿಕಾ ಕಾರಿಡಾರ್, ಹೊಸ ಬಂದರುಗಳು ಹಾಗೂ ಕಲಬುರಗಿಯ ಮೆಗಾ ಟೆಕ್ ಪಾರ್ಕ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ರಾಜ್ಯದಲ್ಲಿ ಜಾರಿಯಲ್ಲಿವೆ ಎಂದರು.

ರಾಜ್ಯದಲ್ಲಿ ಜನಧನ್ ಯೋಜನೆಯಡಿ 2.12 ಕೋಟಿ ಖಾತೆಗಳು ತೆರೆಯಲ್ಪಟ್ಟಿದ್ದು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 1.67 ಕೋಟಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2.60 ಕೋಟಿ ನೋಂದಣಿಗಳು ನಡೆದಿವೆ. ಮುದ್ರಾ ಯೋಜನೆಯಡಿ 3.39 ಲಕ್ಷ ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಅಟಲ್ ಪಿಂಚಣಿ ಯೋಜನೆಯಡಿ 48.9 ಲಕ್ಷ ಚಂದಾದಾರರು, ಸ್ವನಿಧಿ ಯೋಜನೆಯಡಿ 6.14 ಲಕ್ಷ ಫಲಾನುಭವಿಗಳು ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 31.7 ಲಕ್ಷ ಫಲಾನುಭವಿಗಳು ಇದ್ದಾರೆ. ಜಲ ಜೀವನ ಮಿಷನ್ ಯೋಜನೆಯಡಿ 87.7 ಲಕ್ಷ ಗ್ರಾಮೀಣ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಉಜ್ವಲ ಯೋಜನೆಯಡಿ 41.4 ಲಕ್ಷ ಎಲ್‌ಪಿಜಿ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆಯಡಿ 1.89 ಕೋಟಿ ಕಾರ್ಡ್‌ಗಳು ಹಾಗೂ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 402 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 43.2 ಲಕ್ಷ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟ , ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ,, ರಾಜೇಶ್ ನಾಯ್ಕ್, ಕಿಶೋರ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಉಮಾನಾಥ ಕೋಟ್ಯಾನ್, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಕುಂಪಲ , ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!