ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಜೂನ್ 13ರಂದು ರಾತ್ರಿ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಹೋರಿಗಳನ್ನು ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ವಾಹನವು ಕುಲ್ಕುಂದ ದಾಟಿ ಸಾಗುತ್ತಿದ್ದ ವೇಳೆ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಪಿಕಪ್ನಲ್ಲಿ ಎರಡು ಹೋರಿಗಳನ್ನು ಸಾಗಿಸಲಾಗುತ್ತಿದ್ದು, ಅವುಗಳ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು ಎನ್ನಲಾಗಿದೆ. ವಾಹನ ಪಲ್ಟಿಯಾದ ಬಳಿಕ ಜಾನುವಾರುಗಳ ಕೈಕಾಲುಗಳನ್ನು ಬಿಚ್ಚಿ ಸ್ಥಳದಿಂದ ಕರೆದೊಯ್ಯಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರಕಲಗೂಡು ಮೂಲದ ಚಂದ್ರಶೇಖರ ಹಾಗೂ ಮೋಹನ್ ಎಂಬವರು ಜಾನುವಾರು ಸಾಗಾಟದಲ್ಲಿ ತೊಡಗಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.