ಮಂಗಳೂರು: ರೈಲ್ವೇ ಲೆವೆಲ್ ಕ್ರಾಸಿಂಗ್‌ಗಳಲ್ಲಿ ನಿಯಮ ಉಲ್ಲಂಘಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪಾಲಕ್ಕಾಡ್ ವಿಭಾಗದ ಪ್ರಕಟಣೆಯ ಪ್ರಕಾರ, ರಸ್ತೆ ಬಳಕೆದಾರರ ನಿರ್ಲಕ್ಷ್ಯದಿಂದ 2025 ಮತ್ತು 2026ರ ಅವಧಿಯಲ್ಲಿ ಒಟ್ಟು 79 ಲೆವೆಲ್ ಕ್ರಾಸಿಂಗ್ ಅಪಘಾತಗಳು ಸಂಭವಿಸಿವೆ. ಇದರಲ್ಲಿ 2025ರಲ್ಲಿ 55 ಹಾಗೂ 2026ರಲ್ಲಿ 24 ಪ್ರಕರಣಗಳು ದಾಖಲಾಗಿವೆ.
ಗೇಟ್‌ಗಳನ್ನು ಮುಚ್ಚಿದ್ದರೂ ಅಥವಾ ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸಿ ರೈಲು ಹಳಿಗಳನ್ನು ದಾಟಲು ಯತ್ನಿಸಿದ ಪರಿಣಾಮವೇ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಈ ರೀತಿಯ ನಿರ್ಲಕ್ಷ್ಯವು ರಸ್ತೆ ಬಳಕೆದಾರರ ಜೀವಕ್ಕೆ ಮಾತ್ರವಲ್ಲದೆ ರೈಲು ಸಂಚಾರದ ಸುರಕ್ಷತೆಗೂ ಅಪಾಯವನ್ನುಂಟು ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘಿಸಿದ ಆರು ವಾಹನ ಚಾಲಕರ ಚಾಲನಾ ಪರವಾನಿಗೆಯನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಉಳಿದ ಪ್ರಕರಣಗಳು ವಿವಿಧ ಹಂತದ ಪರಿಶೀಲನೆ ಮತ್ತು ಕ್ರಮ ಪ್ರಕ್ರಿಯೆಯಲ್ಲಿವೆ.
2025-26ನೇ ಆರ್ಥಿಕ ವರ್ಷದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಗೆ ವಾಹನ ಢಿಕ್ಕಿ ಹೊಡೆದು ರೈಲ್ವೆ ಆಸ್ತಿಗೆ ಹಾನಿ ಉಂಟು ಮಾಡಿದವರಿಂದ ಒಟ್ಟು ₹17.27 ಲಕ್ಷ ಪರಿಹಾರ ಮೊತ್ತವನ್ನು ವಸೂಲಿ ಮಾಡಲಾಗಿದೆ. ಅಲ್ಲದೆ, ಎಲ್ಲಾ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳನ್ನೂ ಆರಂಭಿಸಲಾಗಿದೆ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ತಿಳಿಸಿದೆ.