ಎಸ್ ಐ ಆರ್ ಸಂದರ್ಭ ಪ್ರತಿಯೊಬ್ಬ ಮತದಾರರ ಸಂವಿಧಾನಿಕ ಹಕ್ಕು ಕಾಪಾಡಲು ಕ್ರಮ ವಹಿಸಲು ದ.ಕ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಗಳಿಗೆ ಸಿಪಿಐಎಂ ಮನವಿ

ಜೂನ್ 30 ರಿಂದ ಎಸ್ಐಆರ್ ರಾಜ್ಯದಲ್ಲಿ ಆರಂಭಗೊಳ್ಳುತ್ತಿದ್ದು, ಪೌರತ್ವವನ್ನು ಸ್ವಯಂ ಮತದಾರರೆ ನಿರೂಪಿಸಿಕೊಂಡು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ತೀವ್ರ ಸಂಕಷ್ಟದ ವಿಧಾನವನ್ನು ಚುನಾವಣಾ ಆಯೋಗ ಅನುಸರಿಸುತ್ತಿರುವುದರಿಂದ ಯಾವೊಬ್ಬ ನಾಗರಿಕನೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ರಾಜ್ಯ ಸರಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಎಂ ರಾಜ್ಯ ಸಮಿತಿಯು ದ.ಕ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಚುನಾವಣಾ ಆಯೋಗ ನಿಗದಿ ಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯೂ ಒದಗಿಸಲು ಸಾಧ್ಯ ಇಲ್ಲದವರಿಗೆ ದಾಖಲೆಗಳನ್ನು ಪಡೆದುಕೊಳ್ಳಲು ನಿಯಮಗಳನ್ನು ಸರಳೀಕರಿಸಿ ಸರಕಾರವೇ ಶೀಘ್ರವಾಗಿ ದಾಖಲೆಗಳನ್ನು ಒದಗಿಸಿಕೊಡುವುದು ಸೇರಿದಂತೆ ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಮುಖ್ಯಮಂತ್ರಿ ಯವರನ್ನು ಆಗ್ರಹಿಸಿದೆ.

ಜನತಾ ಪ್ರಾನಿನಿಧ್ಯ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ರ ವಿವಿಧ ಪರಿಚ್ಚೇಧಗಳ ಪ್ರಕಾರವಾಗಿ ಎಸ್. ಐ. ಆರ್. ನಡೆಸಲು ಚುನಾವಣಾ ಆಯೋಗಕ್ಕೆ ಹಕ್ಕಿಲ್ಲ ಎಂಬುದು ಸಿಪಿಐ(ಎಂ) ತಾತ್ವಿಕ ನಿಲುವು. ಆದರೂ ಎಸ್.ಐ.ಆರ್ ನಡೆಯುತ್ತಿದೆ. ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು ಸೇರಿದಂತೆ ದುರ್ಬಲ ವಿಭಾಗದ ಬಹುಮಂದಿ ಈ ಎಸ್.ಐ.ಆರ್. ನಿಯಮದಿಂದ ಮತದಾರರ ಪಟ್ಟಿಯಿಂದ ಹೊರ ಬೀಳುವ ಭೀತಿಗೆ ಒಳಗಾಗಿದ್ದಾರೆ. ಪಶ್ಚಿಮ ಬಂಗಾಳ ಹೊರತುಪಡಿಸಿ, ಬೇರಾವ ರಾಜ್ಯದಲ್ಲಿಯೂ ಜಾರಿ ಮಾಡದಿದ್ದ “ತಾರ್ಕಿಕ ವ್ಯತ್ಯಾಸ” ಮಾನದಂಡವನ್ನು ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಆಯೋಗ ಅಳವಡಿಸಿದೆ. ಸ್ಪೆಲ್ಲಿಂಗ್ ಮಿಸ್ಟೇಕ್, ಮತದಾರರು ಮತ್ತು ಪೋಷಕರ ನಡುವೆ ವಯಸ್ಸಿನ ಅಂತರ, ಅಂತರಜಾತಿ, ಅಂತರ ಧರ್ಮೀಯ ವಿವಾಹಿತರು , ಬಾಲ್ಯ ವಿವಾಹದ ಸಂಕಷ್ಟವನ್ನು ಅನುಭವಿಸುತ್ತಿರುವವರು ತಾರ್ಕಿಕ ವ್ಯತ್ಯಾಸಗಳ ಕಾರಣಕ್ಕೆ ಅಪಾರವಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಈ ಹಿನ್ನಲೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡು ಮತದಾರರ ಹಕ್ಕುಗಳನ್ನು ಖಾತರಿ ಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಸಮಿತಿ ಸದಸ್ಯರುಗಳಾದ ಸುನಿಲ್‌ ಕುಮಾರ್ ಬಜಾಲ್, ವಸಂತ ಆಚಾರಿ, ಬಿ ಎಮ್ ಭಟ್, ಸುಕುಮಾರ್ ತೊಕ್ಕೊಟು, ಸದಾಶಿವ ದಾಸ್, ಜೆ ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!