ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ : 28 ಕ್ಕೆ ಮುಂಬಯಿಯಲ್ಲಿ ಪ್ರದಾನ

ಕಾಸರಗೋಡು : ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ ‘ನಿರೂಪಣಾ ಕೌಸ್ತುಭ’ ಪ್ರಶಸ್ತಿಯ ಗರಿ. ನಿರೂಪಣಾ ಕ್ಷೇತ್ರದ ಅವರ ಬಹುಮುಖ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬಯಿಯ ಅಂಧೇರಿ ಕರ್ನಾಟಕ ಸಂಘವು ಈ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28 ರಂದು ಅಂಧೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಮುಂಬಯಿಯ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2026 ಕಾರ್ಯಕ್ರಮದಲ್ಲಿ ಈ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಂಘದ ಸಂಸ್ಥಾಪಕರಾಗಿರುವ ಕೃಷ್ಣ.ಬಿ. ಶೆಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಪತ್ರಕರ್ತ, ಲೇಖಕ, ಸಂಘಟಕ, ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿರುವ ರವಿ ನಾಯ್ಕಾಪು ಅವರು ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ ‘ಸ್ನೇಹಗಂಗೆ’ ಕೃತಿಯು ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದ್ದು, ಕೃತಿಯ ಸಂಕ್ಷಿಪ್ತ ರೂಪವು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಒಳಪಟ್ಟಿರುವುದು ಗಮನೀಯ.
ನವದೆಹಲಿಯ ಅಸೋಸಿಯೇಷನ್ ಫಾರ್ ಎಕನಾಮಿಕ್ ಗ್ರೋತ್ ಸಂಘಟನೆಯು ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಅಂತಾರಾಷ್ಟ್ರೀಯ ಪ್ರಶಸ್ತಿಯು 2023 ನೇ ಸಾಲಿನಲ್ಲಿ ರವಿ ನಾಯ್ಕಾಪು ಅವರಿಗೆ ಲಭಿಸಿದೆ. ದುಬಾಯಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಕಥೆ, ಕವನಗಳು, ಸಾಮಾಜಿಕ ಸ್ಪಂದನದ, ಮಾನವೀಯ ಕಳಕಳಿಯ ನೂರಾರು ಬರಹಗಳು, ಪರಿಸರ ಸಂಬಂಧಿ ಲೇಖನಗಳು ಕನ್ನಡದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಅನೇಕ ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕಾ – ದೃಶ್ಯ ಮಾಧ್ಯಮಗಳೆರಡರಲ್ಲಿಯೂ ಪಳಗಿರುವ ಅವರು ಅನೇಕ ಮಾಧ್ಯಮಗಳಲ್ಲಿ ವರದಿಗಾರ, ಉಪ ಸಂಪಾದಕ, ಸುದ್ದಿ ಸಂಪಾದಕ, ಸಂಪಾದಕರ ಹುದ್ದೆಗಳಲ್ಲಿ, ಟಿವಿ ಚಾನೆಲ್ ಗಳ ಸುದ್ದಿ ಸಂಪಾದಕ, ವಾರ್ತಾ ವಾಚಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಓರ್ವ ಉತ್ತಮ ಉದ್ಘಾಷಕರೂ, ಕನ್ನಡ ನಿರೂಪಕರೂ ಆಗಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಹಿತ ಅನೇಕ ಸಾಮಾಜಿಕ, ಸಾಹಿತ್ಯಕ ಸಂಘಟನೆಗಳಲ್ಲಿ ಸಕ್ರಿಯರು.

SHARE
Loading spinner

Leave a Reply

Your email address will not be published. Required fields are marked *

error: Content is protected !!