ಮುಂಗಾರು ಮಳೆ ಕೊರತೆ: ನಾಡದೋಣಿ ಮೀನುಗಾರರಲ್ಲಿ ಆತಂಕ

ಉಡುಪಿ, ಕರಾವಳಿಯಲ್ಲಿ ಮುಂಗಾರು ಪ್ರವೇಶಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದು ನಾಡದೋಣಿ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಎರಡು ತಿಂಗಳ ನಿಷೇಧ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಬೇಕಿದ್ದರೂ, ಸಮುದ್ರದ ಪರಿಸ್ಥಿತಿ ಅನುಕೂಲಕರವಾಗದ ಕಾರಣ ಮೀನುಗಾರರು ಇನ್ನೂ ಸಮುದ್ರಕ್ಕಿಳಿಯಲು ಸಾಧ್ಯವಾಗದೆ ಕಾಯುತ್ತಿದ್ದಾರೆ.

ಮುಂಗಾರು ಆರಂಭವಾಗುತ್ತಿದ್ದಂತೆ ನಾಡದೋಣಿ ಮೀನುಗಾರರು ದೋಣಿಗಳು, ಬಲೆಗಳು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಮಳೆಗಾಲದ ಅವಧಿಯಲ್ಲಿ ಯಾಂತ್ರಿಕ ದೋಣಿಗಳಿಗೆ ನಿಷೇಧ ಇರುವುದರಿಂದ ಇದೇ ಸಮಯದಲ್ಲಿ ನಾಡದೋಣಿ ಮೀನುಗಾರಿಕೆಯೇ ಸಾವಿರಾರು ಕುಟುಂಬಗಳ ಪ್ರಮುಖ ಜೀವನಾಧಾರವಾಗಿದೆ.

ಸಾಮಾನ್ಯವಾಗಿ ಮುಂಗಾರು ಬಿರುಸುಗೊಂಡಾಗ ಸಮುದ್ರದಲ್ಲಿ ತೂಫಾನ್ ಉಂಟಾಗಿ ನೀರಿನಲ್ಲಿ ಮಥನವಾಗುತ್ತದೆ. ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದುಬರುವ ಸಿಹಿನೀರು ಸಮುದ್ರ ಸೇರುವ ಪರಿಣಾಮ ಮೀನುಗಳು ತೀರ ಪ್ರದೇಶದತ್ತ ಬರುತ್ತವೆ. ಇದರಿಂದ ನಾಡದೋಣಿ ಮೀನುಗಾರಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಅಂತಹ ಪರಿಸ್ಥಿತಿ ಇನ್ನೂ ಉಂಟಾಗಿಲ್ಲ.

ಮಳೆ ಕೊರತೆಯಿಂದ ಮೀನುಗಾರಿಕೆ ಆರಂಭದಲ್ಲಿ ವಿಳಂಬವಾಗುತ್ತಿದ್ದು, ಸಾವಿರಾರು ಮೀನುಗಾರ ಕುಟುಂಬಗಳ ಆದಾಯದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ಮೀನುಗಾರರು ಹವಾಮಾನದ ಬದಲಾವಣೆಯತ್ತ ಕಣ್ಣಿಟ್ಟಿದ್ದಾರೆ.

ಇದರ ನಡುವೆ ಸೀಮೆಎಣ್ಣೆ ದರ ಏರಿಕೆಯೂ ನಾಡದೋಣಿ ಮೀನುಗಾರರಿಗೆ ಮತ್ತೊಂದು ಹೊರೆ ತಂದಿದೆ. ಹಿಂದೆ ಲೀಟರ್‌ಗೆ 63 ರೂಪಾಯಿಗೆ ದೊರೆಯುತ್ತಿದ್ದ ಸೀಮೆಎಣ್ಣೆ ಇದೀಗ 111 ರೂಪಾಯಿಗೆ ಏರಿಕೆಯಾಗಿದ್ದು, ಮೀನುಗಾರಿಕೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಸರ್ಕಾರ ಸೀಮೆಎಣ್ಣೆಯನ್ನು ಸಹಾಯಧನ ದರದಲ್ಲಿ ಪೂರೈಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ಒಟ್ಟಾರೆ, ಮುಂಗಾರು ಮಳೆ ಕ್ಷೀಣಿಸಿರುವುದು, ಸಮುದ್ರದಲ್ಲಿ ತೂಫಾನ್ ಉಂಟಾಗದಿರುವುದು ಹಾಗೂ ಸೀಮೆಎಣ್ಣೆ ದರ ಏರಿಕೆಯಂತಹ ಸಮಸ್ಯೆಗಳ ನಡುವೆ ಮಲ್ಪೆ ಭಾಗದ ನಾಡದೋಣಿ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಉತ್ತಮ ಮಳೆ ಸುರಿದು ಸಮುದ್ರದ ಪರಿಸ್ಥಿತಿ ಅನುಕೂಲಕರವಾಗಲಿ ಎಂಬ ನಿರೀಕ್ಷೆಯೊಂದಿಗೆ ಸಾವಿರಾರು ಮೀನುಗಾರ ಕುಟುಂಬಗಳು ಕಾಯುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!