ಕರಾವಳಿ ಪ್ರವಾಸೋದ್ಯಮಕ್ಕೆ ಭರವಸೆಗಳು ಈಡೇರಿಲ್ಲ: ಡಿ.ಕೆ. ಶಿವಕುಮಾರ್ ವಿರುದ್ಧ ವಿವೇಕಾನಂದ ಸಾಲಿನ್ಸ್ ಟೀಕೆ

ಮಂಗಳೂರು ಡಿ.ಕೆ. ಶಿವಕುಮಾರ್ ಅವರು ಇದೇ ವರ್ಷದ ಜನವರಿ 10ರಂದು ಮಂಗಳೂರಿಗೆ ಭೇಟಿ ನೀಡಿ ಹೂಡಿಕೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಕರಾವಳಿ ಕರ್ನಾಟಕಕ್ಕಾಗಿ ಹೊಸ ಪ್ರವಾಸೋದ್ಯಮ ನೀತಿ ರೂಪಿಸುವುದಾಗಿ ಹಾಗೂ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ನೀಡಿದ ಭರವಸೆಗಳು ಇದುವರೆಗೆ ವಿಧಾನಸಭೆಯಲ್ಲಿ ಪ್ರಸ್ತಾವನೆಯಾಗದಿರುವುದು ವಿಷಾದನೀಯ ಎಂದು ವಿವೇಕಾನಂದ ಸಾಲಿನ್ಸ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂಡಿಕೆದಾರರ ಸಭೆಯಲ್ಲಿ ಐಟಿ ಹಾಗೂ ಇತರ ಕೈಗಾರಿಕೆಗಳಿಗೆ ಅಗತ್ಯವಾದ ಬೃಹತ್ ಮೂಲಸೌಕರ್ಯ ಒದಗಿಸುವುದಾಗಿ ನೀಡಿದ ಭರವಸೆಯೂ ಈಡೇರಿಲ್ಲ ಎಂದು ಹೇಳಿದರು.


ಸ್ಥಳೀಯ ಪುರಸಭೆಗಳು ಮತ್ತು ಪಂಚಾಯತ್‌ಗಳು ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದು ಪ್ರವಾಸೋದ್ಯಮದ ಬೆಳವಣಿಗೆಗೆ ಗಂಭೀರ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಉಪಮುಖ್ಯಮಂತ್ರಿಗಳ ಪ್ರಕಾರ ಪ್ರವಾಸೋದ್ಯಮ ಕ್ಷೇತ್ರವು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎನ್ನಲಾಗಿದ್ದರೂ, ವಾಸ್ತವದಲ್ಲಿ ಇದು ರಿಯಲ್ ಎಸ್ಟೇಟ್ ಲಾಬಿಗಳಿಗೆ ಪರೋಕ್ಷ ಉತ್ತೇಜನ ನೀಡುತ್ತಿರುವಂತಿದೆ ಎಂದು ಆರೋಪಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿ ಪ್ರದೇಶಗಳ ಹಸಿರು ಹೊದಿಕೆ ಹಾಗೂ ನೈಸರ್ಗಿಕ ಸಂಪತ್ತು ದೊಡ್ಡ ಪ್ರಮಾಣದಲ್ಲಿ ನಾಶವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು. ಸಿಆರ್‌ಝಡ್ (CRZ) ನಿಯಮಗಳ ಉಲ್ಲಂಘನೆಯೂ ಹೆಚ್ಚುತ್ತಿರುವ ಬಗ್ಗೆ ವರದಿಗಳು ಸೂಚಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು.


ಇದೇ ವೇಳೆ, ಹೋಂಸ್ಟೇಗಳಿಗೆ ಪರವಾನಗಿ ನೀಡುವಲ್ಲಿ ಹಾಗೂ ನವೀಕರಣ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಸ್ಥಳೀಯ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಜಿಲ್ಲಾಡಳಿತ ತ್ವರಿತವಾಗಿ ಮತ್ತು ಸಕಾರಾತ್ಮಕವಾಗಿ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಪಕ್ಷದ ಸದಸ್ಯರಾದ ಸುಜಾತ ಯತೀಶ್, ವಾಸುದೇವ್, ಶಾಲೆಟ್ ಪಿಂಟೊ ಹಾಗೂ ಕಬೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!