ಬಂಟ್ವಾಳ, ಜೂನ್ 20: 2026-27ನೇ ಶೈಕ್ಷಣಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದೇ ಒಂದು ವಿದ್ಯಾರ್ಥಿಯೂ ದಾಖಲಾತಿಯಾಗದ ಹಿನ್ನೆಲೆಯಲ್ಲಿ ಶಾಲೆಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ.
ತಾಲೂಕಿನ ಎಲಿಯನಡುಗೋಡು ಹಾಗೂ ನೇರಳಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು (ಎಲ್.ಪಿ. ಶಾಲೆ) ಈ ವರ್ಷ ಶೂನ್ಯ ದಾಖಲಾತಿ ಹೊಂದಿದ್ದು, ಒಂದರಿಂದ ಐದನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಈ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುವ ಭೀತಿ ಎದುರಿಸುತ್ತಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕನ್ನಡ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಕೂಗು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಇಂಗ್ಲಿಷ್ ಮಾಧ್ಯಮ ಶಿಕ್ಷಣದತ್ತ ಪೋಷಕರ ಒಲವು ಹೆಚ್ಚುತ್ತಿರುವುದು ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಖಾಸಗಿ ಶಾಲೆಗಳ ಪ್ರಾಬಲ್ಯದ ನಡುವೆ ಜಿಲ್ಲೆಯ ಸುಮಾರು 20 ಶಾಲೆಗಳು ಶೂನ್ಯ ದಾಖಲಾತಿ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ತಿಳಿದುಬಂದಿದೆ.
ಶಾಲೆಗಳು ಆರಂಭವಾಗಿ ಸುಮಾರು 20 ದಿನಗಳು ಕಳೆದರೂ ದಾಖಲಾತಿ ಆಗದಿರುವುದು ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಈ ಬಾರಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ‘ದಾಖಲಾತಿ ಆಂದೋಲನ’ವನ್ನು ಜಾರಿಗೆ ತಂದಿದ್ದರೂ, ಅದರ ನಡುವೆಯೇ ತಾಲೂಕಿನ ಎರಡು ಶಾಲೆಗಳು ಶೂನ್ಯ ದಾಖಲಾತಿ ಹೊಂದಿರುವುದು ಗಮನ ಸೆಳೆದಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಲವು ಸೌಲಭ್ಯಗಳು ಜಾರಿಯಲ್ಲಿದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ, ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳು ದಾಖಲಾತಿ ಕುಸಿತಕ್ಕೆ ಕಾರಣವಾಗಿವೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಮಾಲತಿ ಅವರು, “ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಸದ್ಯ ಎಲಿಯನಡುಗೋಡು ಮತ್ತು ನೇರಳಕಟ್ಟೆ ಎಲ್.ಪಿ. ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದ್ದರೂ, ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ತಕ್ಷಣ ಮುಚ್ಚಲಾಗುವುದಿಲ್ಲ. ಇಲಾಖೆಯ ನಿಯಮಾನುಸಾರ ಎರಡು ವರ್ಷಗಳವರೆಗೆ ದಾಖಲಾತಿ ಹೆಚ್ಚಿಸಿಕೊಳ್ಳಲು ಅವಕಾಶವಿದೆ” ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ಇತರೆ ಶಾಲೆಗಳಲ್ಲಿ ದಾಖಲಾತಿ ಅಥವಾ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿಸಿದ ಅವರು, ಸರ್ಕಾರದಿಂದ ಪಠ್ಯಪುಸ್ತಕಗಳ ವಿತರಣೆಯೂ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದರು.