ಮಂಗಳೂರು, ಜೂನ್ 20: ಎಂಆರ್ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಅತ್ಯಾಧುನಿಕ ಖಾಸಗಿ ವಿಮಾನವನ್ನು ಸೇರ್ಪಡೆಗೊಳಿಸಿದ್ದು, ಕರ್ನಾಟಕ ಕರಾವಳಿಯ ಉದ್ಯಮಿಗಳ ಪೈಕಿ ಖಾಸಗಿ ವಿಮಾನ ಹೊಂದಿರುವ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆತಿಥ್ಯೋದ್ಯಮ, ರಿಯಲ್ ಎಸ್ಟೇಟ್ ಹಾಗೂ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಉದ್ಯಮ ನಡೆಸುತ್ತಿರುವ ಡಾ. ಪ್ರಕಾಶ್ ಶೆಟ್ಟಿ ಅವರು ಅಮೆರಿಕದಿಂದ ತರಿಸಲಾದ 14 ಆಸನಗಳ ‘ಎಂಬ್ರೇಯರ್ ಲೆಗಸಿ 650’ (Embraer Legacy 650) ಖಾಸಗಿ ವಿಮಾನವನ್ನು ಎಂಆರ್ಜಿ ಸಮೂಹಕ್ಕೆ ಸೇರ್ಪಡೆಗೊಳಿಸಿದರು.
ಈ ಸಂಬಂಧ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕುಟುಂಬ ಸದಸ್ಯರು, ಆಪ್ತರು ಹಾಗೂ ಹಿತೈಷಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿನಯ, ಪರಿಶ್ರಮ ಹಾಗೂ ದೂರದೃಷ್ಟಿಯ ಮೂಲಕ ಎಂಆರ್ಜಿ ಸಮೂಹವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿರುವ ಡಾ. ಪ್ರಕಾಶ್ ಶೆಟ್ಟಿ ಅವರು ಉದ್ಯಮ ಕ್ಷೇತ್ರದ ಜೊತೆಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಪ್ರತಿವರ್ಷ ‘ಸಹಾಯ ಹಸ್ತ’ ಕಾರ್ಯಕ್ರಮದ ಮೂಲಕ ಸಮಾಜದ ಸೌಲಭ್ಯ ವಂಚಿತ ವರ್ಗಗಳಿಗೆ ನೆರವಾಗುವ ಮೂಲಕ ಸಾಮಾಜಿಕ ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಹೋಟೆಲ್ಗಳು ಹಾಗೂ ಇತರ ಉದ್ಯಮಗಳ ಮೂಲಕ ವಿಸ್ತಾರಗೊಂಡಿರುವ ಎಂಆರ್ಜಿ ಸಮೂಹಕ್ಕೆ ಈ ಹೊಸ ಸೇರ್ಪಡೆ ಮಹತ್ವದ ಮೈಲಿಗಲ್ಲಾಗಿದ್ದು, ಸಂಸ್ಥೆಯ ಬೆಳವಣಿಗೆ ಹಾಗೂ ಜಾಗತಿಕ ದೃಷ್ಟಿಕೋನದ ಪ್ರತೀಕವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದೀರ್ಘ ದೂರದ ಪ್ರಯಾಣ ಸಾಮರ್ಥ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರಾದ ಎಂಬ್ರೇಯರ್ ಲೆಗಸಿ 650 ವಿಮಾನವು ಎಂಆರ್ಜಿ ಸಮೂಹದ ವ್ಯಾಪಾರ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಹಾಗೂ ಸಂಪರ್ಕ ಸಾಮರ್ಥ್ಯವನ್ನು ಒದಗಿಸಲಿದೆ. ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಸಾಧನೆಯ ಪಯಣದಲ್ಲಿ ಇದು ಮತ್ತೊಂದು ಮಹತ್ವದ ಅಧ್ಯಾಯವಾಗಿ ಗುರುತಿಸಿಕೊಂಡಿದೆ