ಡಿಎಸಿಸಿಎಸ್ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ಐದನೇ ಆವೃತ್ತಿಯಲ್ಲಿ ಕರಾವಳಿ ಕಿಂಗ್ಸ್ ಮಂಗಳೂರು ತಂಡದ ಬ್ಯಾಟರ್ ನಿಕಿನ್ ಜೋಸ್ ಸಿಡಿಸಿದ ಅಜೇಯ ಶತಕದ ನೆರವಿನಿಂದ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಎಂಟು ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
178 ರನ್ಗಳ ಗುರಿ ಬೆನ್ನಟ್ಟಿದ ಕರಾವಳಿ ಕಿಂಗ್ಸ್ ಆರಂಭದಲ್ಲೇ ಮುರಳೀಧರ ವೆಂಕಟೇಶ್ ವಿಕೆಟ್ ಕಳೆದುಕೊಂಡರೂ, ನಂತರ ನಿಕಿನ್ ಜೋಸ್ ಹಾಗೂ ನಾಯಕ ಕರೂಣ್ ನಾಯರ್ ಜೋಡಿ ತಂಡವನ್ನು ಸುಲಭವಾಗಿ ಗೆಲುವಿನತ್ತ ಮುನ್ನಡೆಸಿತು. ಈ ಜೋಡಿ ಎರಡನೇ ವಿಕೆಟ್ಗೆ ಕೇವಲ 52 ಎಸೆತಗಳಲ್ಲಿ 96 ರನ್ಗಳ ಅಮೂಲ್ಯ ಜೊತೆಯಾಟ ನಿರ್ಮಿಸಿತು.
ಕರೂಣ್ ನಾಯರ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳೊಂದಿಗೆ ಆಕರ್ಷಕ 56 ರನ್ ಗಳಿಸಿದರು. ಇನ್ನೊಂದೆಡೆ ನಿಕಿನ್ ಜೋಸ್ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರೂ ಬಳಿಕ ಆಕ್ರಮಣಕಾರಿ ಆಟಕ್ಕೆ ತಿರುಗಿ ಗುಲ್ಬರ್ಗಾ ಬೌಲರ್ಗಳನ್ನು ಬೆಂಡೆತ್ತಿದರು.
12ನೇ ಓವರ್ನಲ್ಲಿ ಎರಡನೇ ರನ್ ಓಡುವ ವೇಳೆ ಉಂಟಾದ ಗೊಂದಲದಿಂದ ಕರೂಣ್ ನಾಯರ್ ರನ್ ಔಟ್ ಆದರು. ಆ ಸಂದರ್ಭದಲ್ಲಿ ತಂಡದ ಮೊತ್ತ 108ಕ್ಕೆ 2 ಆಗಿತ್ತು. ಬಳಿಕ ನಿಕಿನ್ ಜೋಸ್ ಅಂತ್ಯದವರೆಗೂ ಕ್ರೀಸ್ನಲ್ಲಿ ಉಳಿದುಕೊಂಡು ಕೇವಲ 47 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳು ಸೇರಿದ್ದವು. ಗೆಲುವಿಗೆ ಬೇಕಿದ್ದ ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಅವರು ಈ ಆವೃತ್ತಿಯ ಮೊದಲ ಶತಕವನ್ನು ದಾಖಲಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ 19.5 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಯಿತು. ಆರಂಭಿಕ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ ತಂಡವನ್ನು ನಾಯಕ ಮನೀಷ್ ಪಾಂಡೆ ಹೋರಾಟದ ಬ್ಯಾಟಿಂಗ್ ಮೂಲಕ ಮೇಲಕ್ಕೆತ್ತಿದರು.
ಪ್ರಖರ್ ಚತುರ್ವೇದಿ (25) ಹಾಗೂ ತಿಪ್ಪಾ ರೆಡ್ಡಿ (25) ಮೂರನೇ ವಿಕೆಟ್ಗೆ 24 ರನ್ ಸೇರಿಸಿದರೂ ಇಬ್ಬರೂ ಶೀಘ್ರದಲ್ಲೇ ಔಟಾದರು. ಮ್ಯಾಕ್ನೀಲ್ ನೊರೊನ್ಹಾ ವಿಕೆಟ್ ಪತನಗೊಂಡಾಗ ತಂಡದ ಮೊತ್ತ 94ಕ್ಕೆ 5 ಆಗಿತ್ತು.
ಈ ವೇಳೆ ಮನೀಷ್ ಪಾಂಡೆ ಹಾಗೂ ಧ್ರುವ್ ಪ್ರಭಾಕರ್ ಜೋಡಿ ಏಳನೇ ವಿಕೆಟ್ಗೆ ಕೇವಲ 31 ಎಸೆತಗಳಲ್ಲಿ 61 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು. ಪಾಂಡೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 70 ರನ್ ಗಳಿಸಿದರು. ಧ್ರುವ್ ಪ್ರಭಾಕರ್ 14 ಎಸೆತಗಳಲ್ಲಿ 22 ರನ್ಗಳ ಕೊಡುಗೆ ನೀಡಿದರು.
ಕೊನೆಯ ಓವರ್ ಆರಂಭವಾಗುವ ವೇಳೆಗೆ ಗುಲ್ಬರ್ಗಾ ತಂಡ 176ಕ್ಕೆ 6 ವಿಕೆಟ್ ಕಳೆದುಕೊಂಡಿದ್ದು 190 ರನ್ಗಳ ಗಡಿ ದಾಟುವ ನಿರೀಕ್ಷೆ ಮೂಡಿಸಿತ್ತು. ಆದರೆ ಸಿ.ಎ. ಕಾರ್ತಿಕ್ ಮೊದಲ ಎಸೆತದಲ್ಲೇ ಮನೀಷ್ ಪಾಂಡೆ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಕುಸಿತಕ್ಕೆ ಕಾರಣರಾದರು. ಬಳಿಕ ಧ್ರುವ್ ಪ್ರಭಾಕರ್ ಹಾಗೂ ಆದಿತ್ಯ ನಾಯರ್ ರನ್ ಔಟ್ ಆಗಿ, ರೋನಿತ್ ಮೋರೆ ಬೌಲ್ಡ್ ಆದ ಪರಿಣಾಮ ಕೇವಲ ಒಂದು ರನ್ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ತಂಡ 177 ರನ್ಗಳಿಗೆ ಆಲೌಟ್ ಆಯಿತು.
ಕರಾವಳಿ ಕಿಂಗ್ಸ್ ಪರ ಸಿ.ಎ. ಕಾರ್ತಿಕ್ 3.5 ಓವರ್ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್ 32 ರನ್ಗೆ 2 ವಿಕೆಟ್ ಹಾಗೂ ಶ್ರೇಯಸ್ ಗೋಪಾಲ್ 40 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ಅಡಿಪಾಯ ಹಾಕಿದರು.
ಈ ಗೆಲುವಿನೊಂದಿಗೆ ಮಳೆಯಿಂದ ರದ್ದಾಗಿದ್ದ ಮೊದಲ ಪಂದ್ಯ ಬಳಿಕ ಕರಾವಳಿ ಕಿಂಗ್ಸ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ಮತ್ತೊಂದೆಡೆ ಗುಲ್ಬರ್ಗಾ ಮಿಸ್ಟಿಕ್ಸ್ ಸತತ ಎರಡನೇ ಸೋಲಿನ ನಿರಾಸೆ ಅನುಭವಿಸಿತು