ವಿಟ್ಲ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಜನಜಾಗೃತಿ ಜಾಥಾ

ವಿಟ್ಲ, ಜೂ.23: ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಹಾಗೂ ಹಿಂದಿನ ವಿಟ್ಲ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಗೆ ಜನಬೆಂಬಲ ಒಗ್ಗೂಡಿಸುವ ಉದ್ದೇಶದಿಂದ ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿಯ ವತಿಯಿಂದ ಸೋಮವಾರ ಜೈನ ಬಸದಿಯಿಂದ ನಾಡಕಚೇರಿವರೆಗೆ ಸಾಂಕೇತಿಕ ಜಾಥಾ ನಡೆಯಿತು.

ಈ ವೇಳೆ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ವಿಟ್ಲ ತಾಲೂಕು ರಚನೆಗೆ ಸುಮಾರು 60 ವರ್ಷಗಳ ಹಿಂದಿನಿಂದಲೂ ಬೇಡಿಕೆ ಇದ್ದರೂ ಇದುವರೆಗೆ ಅದು ಈಡೇರಿಲ್ಲ ಎಂದು ಹೇಳಿದರು. ಹಲವು ಸಂಘಟನೆಗಳು ಹಾಗೂ ಸಮಿತಿಗಳು ಹೋರಾಟ ನಡೆಸಿದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಹೊಸ ಹೋರಾಟ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜನಸಂಖ್ಯೆ ಸೇರಿದಂತೆ ತಾಲೂಕು ರಚನೆಗೆ ಅಗತ್ಯವಿರುವ ಎಲ್ಲಾ ಮಾನದಂಡಗಳು ವಿಟ್ಲಕ್ಕೆ ಪೂರಕವಾಗಿದ್ದರೂ ತಾಲೂಕು ಘೋಷಣೆ ಆಗದಿರುವುದು ಬೇಸರದ ಸಂಗತಿ. ಎಲ್ಲರ ಸಹಕಾರದೊಂದಿಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಸಮಿತಿಯ ಕಾರ್ಯದರ್ಶಿ ಕಾನಾ ಈಶ್ವರ ಭಟ್ ಮಾತನಾಡಿ, 29 ಗ್ರಾಮಗಳನ್ನು ಒಳಗೊಂಡ ವಿಟ್ಲ ತಾಲೂಕು ರಚನೆ ಮಾಡಬೇಕೆಂಬುದು ಸಮಿತಿಯ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ರಚನೆಯಾದ ಹಲವು ತಾಲೂಕುಗಳಿಗಿಂತ ವಿಟ್ಲ ಪ್ರದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ಗ್ರಾಮ ಮಟ್ಟದಲ್ಲಿ ಜನಜಾಗೃತಿ ಮೂಡಿಸಿ ರಾಜಕೀಯ ರಹಿತ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಬಳಿಕ ಸಮಿತಿಯ ಪದಾಧಿಕಾರಿಗಳು ವಿಟ್ಲ ಉಪತಹಶೀಲ್ದಾರ್ ರಶ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಿ.ಕೆ. ಬಶೀರ್, ಉಪಾಧ್ಯಕ್ಷರಾದ ಬಿ.ಎಂ. ಹಸೈನಾರ್ ಹಾಗೂ ಸುದರ್ಶನ್ ಪಡಿಯಾರ್, ಸಂಚಾಲಕ ರಾಮಣ್ಣ ಶೆಟ್ಟಿ ಪಾಲಿಗೆ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಸೇರಿದಂತೆ ಹಲವು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ವಿಟ್ಲ ಠಾಣೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!