ಮಂಗಳೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ನೈಜ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಪ್ರಯತ್ನಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ನಗರದಲ್ಲಿ ನಡೆದ ಎಸ್ಐಆರ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಜನವರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿತ್ತು. ಆದರೆ ಈಗಿನ ಎಸ್ಐಆರ್ ಪ್ರಕ್ರಿಯೆಯ ಮೂಲಕ ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುತ್ತಿದೆ ಎಂದು ದೂರಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾನ್ಯ ಜನರಿಗೆ ಮತದಾನದ ಹಕ್ಕಿರಲಿಲ್ಲ. ಕಾಂಗ್ರೆಸ್ ಪಕ್ಷವೇ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಆರ್ಎಸ್ಎಸ್ ಮತ್ತು ಬಿಜೆಪಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ದೇಶವನ್ನು ಕಟ್ಟಿರುವುದು ಕಾಂಗ್ರೆಸ್ ಪಕ್ಷವಾಗಿದ್ದು, ಬಿಜೆಪಿಯ ಷಡ್ಯಂತ್ರಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕಾಗಿದೆ. ದೇಶ ಇಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ 27 ಲಕ್ಷ ಮತದಾರರನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಿ ಮತದಾನದ ಹಕ್ಕಿನಿಂದ ವಂಚಿಸಲಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿಗೆ ಸಂವಿಧಾನ ಹಾಗೂ ತ್ರಿವರ್ಣ ಧ್ವಜದ ಮೇಲೆಯೇ ನಂಬಿಕೆ ಇಲ್ಲ ಎಂದು ಟೀಕಿಸಿದರು.
“ನಕಲಿ ದಾಖಲೆಗಳಿರುವ ವ್ಯಕ್ತಿ ಪ್ರಧಾನಿಯಾಗಬಹುದು; ಆದರೆ ನೈಜ ದಾಖಲೆಗಳಿರುವ ವ್ಯಕ್ತಿಗೆ ಮತದಾನದ ಹಕ್ಕು ನಿರಾಕರಿಸುವುದು ಸರಿಯೇ?” ಎಂದು ಪ್ರಶ್ನಿಸಿದರು.
ಎಸ್ಐಆರ್ ಪ್ರಕ್ರಿಯೆ ಮೂಲಕ ನಕಲಿ ಮತದಾರರನ್ನು ಪತ್ತೆಹಚ್ಚಿ ಕೈಬಿಡಲಿ. ಆದರೆ ಹೆಚ್ಚಿನ ನಕಲಿ ಮತದಾರರು ಬಿಜೆಪಿ ಹಾಗೂ ಆರ್ಎಸ್ಎಸ್ನಲ್ಲೇ ಇದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.