ಕೊಚ್ಚಿ, ಜೂನ್ 25: ತಿರುವನಂತಪುರಂ ನಗರ ಪಾಲಿಕೆಯ ಉಪ ಮೇಯರ್ ಸೇರಿದಂತೆ 20 ಬಿಜೆಪಿ ಕಾರ್ಪೊರೇಷನ್ ಕೌನ್ಸಿಲರ್ಗಳು ಹಾಗೂ ವಡಕ್ಕೆಂಚೇರಿ ಗ್ರಾಮ ಪಂಚಾಯಿತಿ ಸದಸ್ಯರು ಸ್ವೀಕರಿಸಿದ್ದ ಪ್ರಮಾಣವಚನವನ್ನು ಕೇರಳ ಹೈಕೋರ್ಟ್ ಅಮಾನ್ಯ ಎಂದು ಘೋಷಿಸಿದ್ದು, ನಾಲ್ಕು ವಾರಗಳೊಳಗೆ ಕಾನೂನುಬದ್ಧವಾಗಿ ಮರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿದ್ದ ಕೆಲವು ಬಿಜೆಪಿ ಕೌನ್ಸಿಲರ್ಗಳು ‘ಭಾರತ ಮಾತೆ’, ಸಂಘಟನೆಯ ಹುತಾತ್ಮರು ಹಾಗೂ ‘ಗುರುದೇವ’ರ ಹೆಸರಿನಲ್ಲಿ, ಪಂಚಾಯಿತಿ ಸದಸ್ಯರು ದಿವಂಗತ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಣಿಕೃಷ್ಣನ್, ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಪುರಸಭೆ ಕಾಯ್ದೆಯ ಪ್ರಕಾರ ‘ದೇವರ ಹೆಸರಿನಲ್ಲಿ’ ಅಥವಾ ‘ಗಂಭೀರ ದೃಢೀಕರಣದ ಮೂಲಕ’ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು ಎಂದು ಸ್ಪಷ್ಟಪಡಿಸಿದರು.
ವ್ಯಕ್ತಿಗಳು, ಸಂಘಟನೆಗಳು ಅಥವಾ ಪರಿಕಲ್ಪನೆಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ಕಾನೂನಿನ ಉದ್ದೇಶಕ್ಕೆ ವಿರುದ್ಧವಾಗಿದ್ದು, ತೀರ್ಪಿನ ವ್ಯಾಪ್ತಿಗೆ ಒಳಪಡುವ ಎಲ್ಲ ಸದಸ್ಯರು ನಾಲ್ಕು ವಾರಗಳೊಳಗೆ ಮರು ಪ್ರಮಾಣವಚನ ಸ್ವೀಕರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.