ಮಂಗಳೂರು: ಡಿಸಿ ಮನ್ನಾ ಭೂಮಿ ಹಂಚಿಕೆ ಸೇರಿದಂತೆ ಜಿಲ್ಲೆಯ ದಲಿತರ ಭೂ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಳಗ ಎಚ್ಚರಿಸಿದೆ.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ದಿವಂಗತ ಎಂ. ದೇವದಾಸ್ ಅವರ ಸ್ಮರಣಾರ್ಥ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಸೋಮಶೇಖರ್ ಮಾತನಾಡಿ, ದೇವದಾಸ್ ಅವರು ಡಿಸಿ ಮನ್ನಾ ಭೂಮಿಯನ್ನು ಬಡವರು ಹಾಗೂ ಶೋಷಿತ ಸಮುದಾಯಗಳಿಗೆ ಹಂಚಿಕೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಅವರ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುವುದು ಸಂಘಟನೆಯ ಜವಾಬ್ದಾರಿಯಾಗಿದೆ ಎಂದರು.

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಡಿಸಿ ಮನ್ನಾ ಭೂಮಿ ಲಭ್ಯವಿದ್ದು, ಮಂಗಳೂರಿನಲ್ಲಿ ಆರಂಭದಲ್ಲಿ ಸುಮಾರು 8,500 ಎಕರೆ ಭೂಮಿ ಇತ್ತು. ಇದರಲ್ಲಿ ಬಹುಪಾಲು ಭೂಮಿ ಈಗಾಗಲೇ ಒತ್ತುವರಿಯಾಗಿದ್ದು, ಪ್ರಸ್ತುತ ಸುಮಾರು 190 ಎಕರೆ ಭೂಮಿ ಮಾತ್ರ ಉಳಿದಿದೆ ಎಂದು ಅವರು ತಿಳಿಸಿದರು.
ಉಳಿದಿರುವ ಭೂಮಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಶೋಷಿತ ಹಾಗೂ ಬಡ ಸಮುದಾಯಗಳ ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಈ ಸಂಬಂಧ ಈಗಾಗಲೇ 5,590 ಮಂದಿ ಅರ್ಜಿ ಸಲ್ಲಿಸಿದ್ದು, ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಬೇಕೆಂಬುದು ದೇವದಾಸ್ ಅವರ ಪ್ರಮುಖ ಬೇಡಿಕೆಯಾಗಿತ್ತು ಎಂದು ಸೋಮಶೇಖರ್ ಹೇಳಿದರು.

2017ರಿಂದ ಕಡತ ಬಾಕಿ
ಡಿ.ಸಿ. ಮನ್ನಾ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ 2016 ಮತ್ತು 2017ರಲ್ಲಿ ದಲಿತ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ನಡೆಸಿದ್ದವು. ಬಳಿಕ 2017ರಲ್ಲಿ ಜಿಲ್ಲಾಡಳಿತವು ವಿಶೇಷ ಭೂ ಮಂಜೂರಾತಿ ನಿಯಮಗಳ ಕರಡು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಿತ್ತು. ಆದರೆ, ಒಂಬತ್ತು ವರ್ಷ ಕಳೆದರೂ ಈ ಬಗ್ಗೆ ಸರ್ಕಾರ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
2017ರ ವಿಶೇಷ ಭೂ ಮಂಜೂರಾತಿ ನಿಯಮಗಳ ಬದಲಾಗಿ, ಉಪವಿಭಾಗಾಧಿಕಾರಿಗಳ ವರದಿಯ ಆಧಾರದ ಮೇಲೆ ಲಭ್ಯವಿರುವ ಡಿಸಿ ಮನ್ನಾ ಭೂಮಿಯನ್ನು ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಕುಟುಂಬಗಳಿಗೆ ಮಂಜೂರು ಮಾಡಲು 1969ರ ಭೂ ಮಂಜೂರಾತಿ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಜಿಲ್ಲಾಧಿಕಾರಿಗಳು 2024ರ ಡಿಸೆಂಬರ್ 20ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದರು.

ಕಳೆದ ಸುಮಾರು 10 ವರ್ಷಗಳಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಗಳಲ್ಲಿ ಡಿಸಿ ಮನ್ನಾ ಭೂಮಿ ಹಂಚಿಕೆಯ ಬಗ್ಗೆ ದಲಿತ ಸಂಘಟನೆಗಳು ಪ್ರಶ್ನಿಸುತ್ತಿವೆ. ಆದರೆ, “ಕಡತ ಸರ್ಕಾರದ ಮಟ್ಟದಲ್ಲಿದೆ” ಎಂಬ ಉತ್ತರ ಮಾತ್ರ ಸಿಗುತ್ತಿದೆ. ಇದರಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಜಿಲ್ಲೆಯ ದಲಿತರ ಭೂ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಸೋಮಶೇಖರ್ ಆರೋಪಿಸಿದರು.

ಪರಮೇಶ್ವರ್, ಖಾದರ್ ಅವರಿಗೂ ಮನವಿ
ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ದಲಿತ ನಾಯಕರ ಹಾಗೂ ರಾಜ್ಯ ಮಟ್ಟದ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಡಳಿತವೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಕಡತವನ್ನು ಸರ್ಕಾರಕ್ಕೆ ಕಳುಹಿಸಿದ ಬಳಿಕ ಸುಮ್ಮನಿರದೆ, ಅದರ ಅನುಮೋದನೆಗಾಗಿ ನಿರಂತರವಾಗಿ ಅನುಸರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಒಂದು ತಿಂಗಳ ಗಡುವು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಶೋಷಿತ ಸಮುದಾಯಗಳ ಅರ್ಹ ಕುಟುಂಬಗಳಿಗೆ ಡಿಸಿ ಮನ್ನಾ ಭೂಮಿಯನ್ನು ತಕ್ಷಣ ಮಂಜೂರು ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿರುವ ಸಂಘಟನೆ, ಒಂದು ತಿಂಗಳೊಳಗೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದೆ.
“ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಂದಾಯ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆಸಿ ಹೋರಾಟ ನಡೆಸುತ್ತೇವೆ. ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ನಮ್ಮ ಉದ್ದೇಶವಲ್ಲ; ಬಡ ಹಾಗೂ ಶೋಷಿತ ಕುಟುಂಬಗಳಿಗೆ ನ್ಯಾಯ ದೊರಕಿಸುವುದೇ ನಮ್ಮ ಉದ್ದೇಶ” ಎಂದು ಸೋಮಶೇಖರ್ ಹೇಳಿದರು.
ದಿವಂಗತ ಎಂ. ದೇವದಾಸ್ ಅವರ ನೆನಪಿನಲ್ಲಿ ಡಿಸಿ ಮನ್ನಾ ಭೂಮಿ ಹಂಚಿಕೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಶ್ರೀಧರ್, ವೆಂಕಟಗಿರಿ, ಕೋಲಾರ ನಾರಾಯಣಸ್ವಾಮಿ, ಅಂಧಾನಿ ಸೋಮನಹಳ್ಳಿ, ಶಿವಮೂರ್ತಿ, ಸದಾಶಿವ ಪಡುಬಿದ್ರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

