ಮಂಗಳೂರಿನಲ್ಲಿ ಶಾರುಖ್ ಖಾನ್ ಜಾದು: ‘ರೋಹನ್ ಮರೀನಾ ಒನ್’ ಅನಾವರಣ, ಅಭಿಮಾನಿಗಳ ಸಂಭ್ರಮ

ಮಂಗಳೂರು, ಜೂ.26: ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅವರ ಉಪಸ್ಥಿತಿಯಲ್ಲಿ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಗುರುವಾರ ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ವಿಶೇಷ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಶನ್‌ನ ಐಷಾರಾಮಿ ಸಮುದ್ರತೀರ ವಸತಿ ಯೋಜನೆಯಾದ ‘ರೋಹನ್ ಮರೀನಾ ಒನ್’ ಅನ್ನು ಶಾರುಖ್ ಖಾನ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರಿನ ಆತಿಥ್ಯ, ಸಂಸ್ಕೃತಿ ಹಾಗೂ ನಗರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಶ್ಲಾಘಿಸಿದರು. ರೋಹನ್ ಕಾರ್ಪೊರೇಶನ್ ನಗರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ‘ರೋಹನ್ ಮರೀನಾ ಒನ್’ ಯೋಜನೆ ಅತ್ಯುತ್ತಮವಾಗಿ ನಿರ್ಮಾಣಗೊಂಡಿದ್ದು, ಎಲ್ಲ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಆಕರ್ಷಕ ವಸತಿ ಯೋಜನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಳುವಿನಲ್ಲಿ ಮಾತು ಆರಂಭ

“ನಮಸ್ಕಾರ ಕುಡ್ಲ… ಎಂಚ ಉಲ್ಲರ್” ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಶಾರುಖ್ ಖಾನ್, ಮಂಗಳೂರಿಗೆ ಬಂದಿರುವುದು ಸಂತಸದ ವಿಚಾರ ಎಂದರು.

“ನನ್ನ ಬಾಲ್ಯದ ಕೆಲ ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಆ ದಿನಗಳ ನೆನಪು ಮತ್ತೆ ಮೂಡಿದೆ. ಮುಂದೆಯೂ ಮಂಗಳೂರಿಗೆ ಬರುತ್ತೇನೆ. ಇಲ್ಲಿನ ನೀರ್‌ದೋಸೆ ನನಗೆ ತುಂಬಾ ಇಷ್ಟ” ಎಂದು ಹೇಳಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

ಪ್ರೇರಣೆಯ ಪ್ರತೀಕ: ಡಾ. ರೋಹನ್ ಮೊಂತೇರೊ

ರೋಹನ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ ಮಾತನಾಡಿ, ಶಾರುಖ್ ಖಾನ್ ಅವರ ಬದುಕಿನ ಪಯಣ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. ಕನಸು ಕಾಣುವ ಧೈರ್ಯ, ನಿರಂತರ ಪರಿಶ್ರಮ ಹಾಗೂ ಸಾಧನೆಯತ್ತ ಇರುವ ಬದ್ಧತೆಯೇ ಯಶಸ್ಸಿನ ನಿಜವಾದ ಮಾರ್ಗ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ. ಮಂಗಳೂರಿನ ಅಭಿವೃದ್ಧಿಯ ಉದ್ದೇಶದೊಂದಿಗೆ ರೋಹನ್ ಕಾರ್ಪೊರೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ವಿಶ್ವಮಟ್ಟದ ಅನುಭವ ನೀಡುವ ಉದ್ದೇಶ

ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆಯು ಸಂಸ್ಥೆಯ ಪಯಣದ ಸ್ಮರಣೀಯ ಘಟ್ಟವಾಗಿ ಉಳಿದಿದೆ ಎಂದರು.

ಬಳಿಕ ನಡೆದ ವಿಶೇಷ ಸಂವಾದದಲ್ಲಿ ಶಾರುಖ್ ಖಾನ್, ಡಾ. ರೋಹನ್ ಮೊಂತೇರೊ ಹಾಗೂ ಡಿಯೋನ್ ಮೊಂತೇರೊ ಅವರು ಮಹತ್ವಾಕಾಂಕ್ಷೆ, ನಾಯಕತ್ವ, ಉದ್ಯಮಶೀಲತೆ, ಪರಿಶ್ರಮ ಹಾಗೂ ಯಶಸ್ಸಿನ ಪಯಣದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಾಂಸ್ಕೃತಿಕ ವೈಭವ

ಕಾರ್ಯಕ್ರಮದಲ್ಲಿ ಕರಾವಳಿಯ ವಿವಿಧ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಇಂಡಿಯನ್ ಐಡಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ ಅವರ ಗಾಯನ ಕಾರ್ಯಕ್ರಮವೂ ವಿಶೇಷ ಆಕರ್ಷಣೆಯಾಗಿತ್ತು.

ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮ ವಲಯದ ಗಣ್ಯರು, ವಿವಿಧ ಕ್ಷೇತ್ರಗಳ ಪ್ರಮುಖರು, ಸಮಾಜದ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ರೋಹನ್ ಕಾರ್ಪೊರೇಶನ್‌ನ ಹಿತೈಷಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಸಾಹಿಲ್ ಜಹೀರ್ ಹಾಗೂ ಆರ್‌ಜೆ ಡೋನಾ ಕಾರ್ಯಕ್ರಮ ನಿರೂಪಿಸಿದರು.

ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

ಇದಕ್ಕೂ ಮುನ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಆಗಮಿಸಿದ ಶಾರುಖ್ ಖಾನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದ ಶಾರುಖ್ ಖಾನ್ ಬಳಿಕ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!