ಕನ್ನಡ ನೆಲ-ನುಡಿಗಾಗಿ ಜೀವಮಾನವಿಡೀ ಹೋರಾಡಿದ ಕಯ್ಯಾರರು: ಪ್ರೊ. ಎಸ್.ಜಿ. ಸಿದ್ದರಾಮಯ್ಯ

ಉಪ್ಪಳ, :ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರು ಕನ್ನಡ ಭಾಷೆ, ನೆಲ ಹಾಗೂ ಅಸ್ಮಿತೆಗಾಗಿ ಜೀವನದ ಕೊನೆಯವರೆಗೂ ಹೋರಾಟ ನಡೆಸಿದ ಅಪರೂಪದ ವ್ಯಕ್ತಿತ್ವವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮತ್ತು ಕಲೆಯ ವಿಶಿಷ್ಟ ಛಾಪು ಮೂಡಿಸಿದ ಮಹಾನ್ ಕವಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಭಾನುವಾರ ಕಯ್ಯಾರು ಕೊಕ್ಕಟಾಲು ಕಾಮಿಲ್ ಶಾಲಾ ವಠಾರದಲ್ಲಿ ಆಯೋಜಿಸಿದ್ದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟ, ಕನ್ನಡ ಏಕೀಕರಣ ಹಾಗೂ ಗಡಿಭಾಗದ ಕನ್ನಡಿಗರ ಹಕ್ಕುಗಳ ಹೋರಾಟದಲ್ಲಿ ಕಯ್ಯಾರರು ಮುಂಚೂಣಿಯಲ್ಲಿದ್ದರು. ಶಿಕ್ಷಕ, ರಾಜಕಾರಣಿ, ಹರಿಜನ ಸೇವಕ ಹಾಗೂ ಸಾಹಿತಿಯಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಅವರು ಕರಾವಳಿಯ ಕನ್ನಡ ಪ್ರಜ್ಞೆಗೆ ಹೊಸ ಆಯಾಮ ನೀಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕಯ್ಯಾರರ ಸಾಹಿತ್ಯ ಹಾಗೂ ಹೋರಾಟದ ಬದುಕು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಆಶ್ರಫ್ ಮಾತನಾಡಿ, ಕಯ್ಯಾರರ ಸಾಹಿತ್ಯ ಕೃತಿಗಳೇ ತಮ್ಮಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಮೂಡಲು ಕಾರಣವಾಗಿವೆ ಎಂದು ತಿಳಿಸಿದರು. ಅವರ ಹೋರಾಟದ ಮನೋಭಾವವೇ ತಮಗೆ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲು ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಲು ಪ್ರೇರಣೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹಾಗೂ ಎಟಿಎಸ್ ಆಡಳಿತ ನಿರ್ದೇಶಕ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರಿಗೆ ‘ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ-2026’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಸವರಾಜ ಎಸ್. ಹೊರಟ್ಟಿ, ಕಾಸರಗೋಡಿನ ಕನ್ನಡ ಅಸ್ಮಿತೆ ಮತ್ತು ಭಾಷಾಭಿಮಾನ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು. ಡಾ. ಮೂಡಂಬೈಲು ರವಿ ಶೆಟ್ಟಿ ಮಾತನಾಡಿ, ಕಯ್ಯಾರರಂತಹ ಸಾಧಕರ ಸಾಹಿತ್ಯ ಜನರ ಬದುಕಿನ ಭಾಗವಾದಾಗ ಸಮಾಜ ಸುಭಿಕ್ಷವಾಗುತ್ತದೆ ಎಂದು ಹೇಳಿದರು.

ಶಿವಾನಂದ ಕೋಟ್ಯಾನ್ ಕಟಪಾಡಿ ರಚಿಸಿದ ‘ಪರಂಪರೆಯ ಪಯಣ’ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಬಿಡುಗಡೆಗೊಳಿಸಿದರು. ಕಯ್ಯಾರರ ಪುತ್ರ ಡಾ. ಪ್ರಸನ್ನ ರೈ ಕಲ್ಲಕಳಿ ಅವರು ಕಯ್ಯಾರರ ಗೀತೆಗಳನ್ನು ಗಾಯನ ಮಾಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ದೀಪಕ್ ವಿ.ಕೆ., ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಪ್ರಗತಿಪರ ಕೃಷಿಕ ರಾಮಣ್ಣ ಅತ್ತಾರ್ ಹಾಗೂ ನಾಟಿ ವೈದ್ಯ ಮೊಹಮ್ಮದ್ ಪರಂಬಳ ಅವರನ್ನು ಸನ್ಮಾನಿಸಲಾಯಿತು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿದರು. ಪುರುಷೋತ್ತಮ ಭಟ್ ಕೆ. ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ನಾಡಗೀತೆ, ಕನ್ನಡ ಗೀತೆಗಳ ಗಾಯನ, ಭರತನಾಟ್ಯ, ಕಥಕ್, ಜಾನಪದ ಹಾಗೂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ನಡೆದವು.

SHARE
Loading spinner

Leave a Reply

Your email address will not be published. Required fields are marked *

error: Content is protected !!