ಧರ್ಮಸ್ಥಳ,: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ವಿವಾದದ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಅಡ್ಡ ಮತದಾನದ ಸತ್ಯಾಸತ್ಯತೆ ಕುರಿತು ಚರ್ಚಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ವಿಜಯೇಂದ್ರ ಅವರು ಮುಂದಾಗಿದ್ದರು. ಆದರೆ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಸಭೆಯನ್ನು ರದ್ದುಗೊಳಿಸಲಾಯಿತು.
ಬಳಿಕ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿದಂತೆ ಕರಾವಳಿ ಭಾಗದ ಬಿಜೆಪಿ ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.