ಕೆ.ಪಿ.ಟಿ. ಶ್ರೀ ರಾಮಮಂದಿರಕ್ಕೆ ಶತಮಾನೋತ್ಸವ ಸಂಭ್ರಮ; ನ.13ರಿಂದ 10 ದಿನಗಳ ಧಾರ್ಮಿಕ ಕಾರ್ಯಕ್ರಮ

ಮಂಗಳೂರು: ಕೆ.ಪಿ.ಟಿ. ಸಮೀಪದ ಐ.ಟಿ.ಐ. ಬಳಿ ಇರುವ ಶ್ರೀ ರಾಮಮಂದಿರ (ರಿ.) ತನ್ನ ಸ್ಥಾಪನೆಯ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ನವೆಂಬರ್ 13ರಿಂದ 22ರವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಉರ್ವ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರ ನೀಡಿದ ಅವರು, ನವೆಂಬರ್ 12ರಂದು ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ದೇವಾಲಯದ ತಂತ್ರಿಗಳಾದ ಶ್ರೀ ಶ್ರೀ ವೇದಮೂರ್ತಿ ವಿಠಲದಾಸ ತಂತ್ರಿಗಳ ದೀಪಪ್ರಜ್ವಲನೆಯೊಂದಿಗೆ ಹೊರೆಕಾಣಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ಪದವಿನಂಗಡಿ ಶ್ರೀದೇವಿ ಕಟ್ಟೆಯಿಂದ ವಿವಿಧ ಆಕರ್ಷಕ ಸ್ತಬ್ಧಚಿತ್ರಗಳು, ಚಂಡೆ, ಕುಣಿತ ಭಜನೆ ಮೊದಲಾದ ಕಲಾತಂಡಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದ್ದು, ಮೇರಿಹಿಲ್ ಮತ್ತು ಎಯ್ಯಾಡಿ ಮಾರ್ಗವಾಗಿ ಶ್ರೀ ರಾಮಮಂದಿರವನ್ನು ತಲುಪಲಿದೆ ಎಂದರು.

ಶತಮಾನೋತ್ಸವದ ವಿಶೇಷ ಕೊಡುಗೆಯಾಗಿ ಮಂದಿರದ ಮಹಾಗಣಪತಿ, ಶ್ರೀರಾಮ, ಲಕ್ಷ್ಮಣ, ಸೀತಾ ಹಾಗೂ ಮುಖ್ಯಪ್ರಾಣ ದೇವರಿಗೆ ಬೆಳ್ಳಿಯ ಕವಚಗಳನ್ನು ಸಮರ್ಪಿಸಲಾಗುವುದು. ಈ ಕವಚಗಳನ್ನು ಹೊರೆಕಾಣಿಕೆ ಮೆರವಣಿಗೆಯ ಮೂಲಕ ಮಂದಿರಕ್ಕೆ ತರಲಾಗುವುದು ಎಂದು ತಿಳಿಸಿದರು.

ಲೋಕಕಲ್ಯಾಣಾರ್ಥವಾಗಿ ನವೆಂಬರ್ 13ರಂದು ಶುಕ್ರವಾರ ಬೆಳಿಗ್ಗೆ 8.30ಕ್ಕೆ ಶ್ರೀ ಶ್ರೀ ವೇದಮೂರ್ತಿ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ನವೆಂಬರ್ 14ರಂದು ಸೂರ್ಯೋದಯದಿಂದ ಆರಂಭವಾಗಿ ನವೆಂಬರ್ 21ರಂದು ಸೂರ್ಯೋದಯದವರೆಗೆ ಅಖಂಡ ಸಪ್ತಾಹ ಭಜನೋತ್ಸವ ಜರುಗಲಿದೆ.

ಇದರೊಂದಿಗೆ ನವೆಂಬರ್ 15ರಂದು ಚಂಡಿಕಾಯಾಗ ಹಾಗೂ ನವೆಂಬರ್ 17ರಂದು ಶ್ರೀ ಮಹಾಗಣಪತಿ ದೇವರಿಗೆ ಅಪ್ಪದ ಪೂಜೆ ಸೇರಿದಂತೆ ಹತ್ತು ದಿನಗಳ ಅವಧಿಯಲ್ಲಿ ಒಟ್ಟು 19 ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನವೆಂಬರ್ 22ರಂದು ಶತಮಾನೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಕಟೀಲು ದೇವಾಲಯದ ಆನುವಂಶಿಕ ಮೊಕ್ತೇಸರರಾದ ಅನಂತ ಪದ್ಮನಾಭ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಶತಮಾನೋತ್ಸವದ ಸವಿನೆನಪಿಗಾಗಿ ಸಿದ್ಧಪಡಿಸಿರುವ ಸ್ಮರಣ ಸಂಚಿಕೆಯನ್ನು ಸಂಸದ ಬ್ರಿಜೇಶ್ ಚೌಟ ಬಿಡುಗಡೆಗೊಳಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾತೃಸಂಘದ ವತಿಯಿಂದ ‘ನವಶಕ್ತಿ ವೈಭವ’ ಕಾರ್ಯಕ್ರಮ ಹಾಗೂ ‘ಜೋಡು ಜೀಟಿಕೆ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಳಸಿದಾಸ್ ಉರ್ವ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಗೌರವಾಧ್ಯಕ್ಷ ಪದ್ಮನಾಭ ಕೊಡಿಯಾಲ್ ಬೈಲ್, ಅಧ್ಯಕ್ಷ ಕಮಲಾಕ್ಷ ಬಂಗೇರ, ಉಪಾಧ್ಯಕ್ಷ ಮೋಹನ್ ಗುಜ್ಜೋಟ್ಟು, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಅಜ್ಜಿಕಾನಕಟ್ಟೆ, ಮಾತೃಸಂಘದ ಅಧ್ಯಕ್ಷೆ ಸುಚಿತ್ರಾ ಶಿವಾನಂದ್ ಹಾಗೂ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷೆ ದಿವ್ಯಾ ಸುನಿಲ್ ಕೊಪ್ಪಲಕಾಡು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!