ಮಂಗಳೂರು6: ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ ಅವರು ಶಾಲಾ ದಿನಗಳಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದು, ಪತ್ರಕರ್ತರಾಗಿಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್, ಮಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ಸ್ಮರಣಾರ್ಥ ದತ್ತಿನಿಧಿ ಹಸ್ತಾಂತರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಟ್ರಸ್ಟ್ ತನ್ನ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ಉಮಿಯ ರಾಧಾಕೃಷ್ಣ ರೈ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತಹ ಸಮಾಜಮುಖಿ ಕಾರ್ಯದ ಮೂಲಕ ಗುರುವಪ್ಪ ಬಾಳೆಪುಣಿ ಅವರ ಸ್ಮರಣೆಯನ್ನು ಜೀವಂತವಾಗಿರಿಸಲಾಗಿದೆ. ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನಾ ಶೆಟ್ಟಿ ಮಾತನಾಡಿ, ಇಂದು ನೆರವು ಪಡೆಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ ಗುರುವಪ್ಪ ಬಾಳೆಪುಣಿ ಅವರ ಆದರ್ಶಗಳನ್ನು ಮೀರಿ ಬೆಳೆಯಬೇಕು. ಸತ್ಯ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಪತ್ರಕರ್ತರು ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಮೋಹನ್ ದಾಸ್ ಮರಕಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾಧಿಕಾರಿ ಖಾದರ್ ಷಾ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್, ಕಾವೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲೋಕೇಶ್, ನಿರಂಜನ್ ಗಾಂಧಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅನ್ಸಾರ್ ಇನೋಳಿ ಸ್ವಾಗತಿಸಿದರು. ಮಾನಸ ವಂದಿಸಿದರು. ಭಬಿತಾ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ವತಿಯಿಂದ ತ್ರಿಷಾ ಕಾಲೇಜಿನ ಧೃತಿ (ಕುಂಜತ್ತಬೈಲ್), ಕೆನರಾ ಕಾಲೇಜಿನ ಮೇಘಾ ಸಜಿಪ, ಸಂತ ಅಲೋಶಿಯಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ತ್ರಿಷಾ (ಪಚ್ಚನಾಡಿ), ಕೆನರಾ ಕಾಲೇಜಿನ ಶ್ರೀಜಾ ಶೆಟ್ಟಿ, ಬಿ.ಸಿ.ರೋಡಿನ ಶೋಭಿತಾ, ದಡ್ಡಲಕಾಡು ಶಾಲೆಯ ಪ್ರಾಪ್ತಿ, ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ಶ್ರೇಯಾ ಹಾಗೂ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ರಶ್ಮಿತ್ ಅವರಿಗೆ ಈ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ನೆರವು ವಿತರಿಸಲಾಯಿತು.