ಕೈವ್: ರಷ್ಯಾ–ಉಕ್ರೇನ್ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿರುವ ನಡುವೆ, ಉಕ್ರೇನ್‌ನ ಚೋರ್ನೊಮೊರ್ಸ್ಕ್ (Chornomorsk) ಬಂದರಿನ ಸಮೀಪ ವಾಣಿಜ್ಯ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಬೆಳಕಿಗೆ ಬಂದಿದೆ. ಹಡಗಿನ ಸುತ್ತಮುತ್ತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಸಿಬ್ಬಂದಿ ಜೀವಭಯದಲ್ಲಿ ದಿನ ಕಳೆಯುತ್ತಿರುವುದಾಗಿ ಭಾರತೀಯ ನಾವಿಕರ ಒಕ್ಕೂಟ (FSUI) ತಿಳಿಸಿದೆ.

FSUI ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಚೋರ್ನೊಮೊರ್ಸ್ಕ್ ಬಂದರಿನ ಸುತ್ತ ಯುದ್ಧದ ತೀವ್ರತೆ ಹೆಚ್ಚಿದ್ದು, ನಿರಂತರ ಸ್ಫೋಟಗಳ ನಡುವೆ ಹಡಗಿನಲ್ಲಿರುವ ಸಿಬ್ಬಂದಿಗೆ ಸುರಕ್ಷಿತವಾಗಿ ಹೊರಬರುವ ಅವಕಾಶವೇ ಇಲ್ಲದಂತಾಗಿದೆ. ಯಾವುದೇ ಕ್ಷಣದಲ್ಲಾದರೂ ಹಡಗಿನ ಮೇಲೆ ನೇರ ಕ್ಷಿಪಣಿ ದಾಳಿ ಸಂಭವಿಸುವ ಸಾಧ್ಯತೆ ಇರುವುದರಿಂದ ನಾವಿಕರ ಸುರಕ್ಷತೆ ಕುರಿತು ತೀವ್ರ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಭಾರತೀಯ ನಾವಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು FSUI ಆಗ್ರಹಿಸಿದೆ. ಜೊತೆಗೆ, ಹಡಗಿನ ಮಾಲೀಕರು ಹಾಗೂ ಸಂಬಂಧಿತ ಶಿಪ್ಪಿಂಗ್ ಕಂಪನಿಗಳು ಸಿಬ್ಬಂದಿಯ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಈ ಬೆಳವಣಿಗೆಯ ನಡುವೆಯೇ, FSUI ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಡಗಿನಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ವಿಡಿಯೊವೊಂದನ್ನು ಹಂಚಿಕೊಂಡಿದೆ. ವಿಡಿಯೊದಲ್ಲಿ ಬಂದರಿನ ಸುತ್ತಮುತ್ತ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಹಾಗೂ ಸ್ಫೋಟಗಳ ನಂತರದ ಉದ್ವಿಗ್ನ ಪರಿಸ್ಥಿತಿ ಗೋಚರಿಸುತ್ತಿದೆ.

ಇದೀಗ ಈ ಘಟನೆ ಕುರಿತು ಭಾರತದ ವಿದೇಶಾಂಗ ಸಚಿವಾಲಯ (MEA) ಅಥವಾ ಸಂಬಂಧಿತ ಹಡಗು ಕಂಪನಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ. ಪರಿಸ್ಥಿತಿಯ ಮೇಲೆ ಭಾರತ ಸರ್ಕಾರ ನಿಗಾ ವಹಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಭಾರತೀಯ ನಾವಿಕರ ಕುಟುಂಬಗಳು ಹಾಗೂ ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

