ಕೊಲೆ, ಕೊಲೆ ಯತ್ನ ಸೇರಿದಂತೆ 30 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ; ಕಳೆದ ವರ್ಷ 14 ಮಂದಿಯ ವಿರುದ್ಧ ಗಡಿಪಾರು ಕ್ರಮ
ಉಡುಪಿ, ಜೂನ್ 27:
ಜಿಲ್ಲೆಯ ಮೂವರು ರೌಡಿ ಶೀಟರ್‌ಗಳ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ (23), ಕರಾಣಿ ಮುಸೀನ್ (44) ಹಾಗೂ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ (36) ಅವರಿಗೆ ಜೂನ್ 24ರಂದು ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೊಹಮ್ಮದ್ ದಾನೀಶ್ ಮದನಿ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ. ಕರಾಣಿ ಮುಸೀನ್ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧವೂ ರೌಡಿ ಶೀಟರ್ ತೆರೆಯಲಾಗಿದೆ. ಇಲಿಯಾಸ್ ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.
ಈ ಮೂವರ ವಿರುದ್ಧ ಕೊಲೆ, ಕೊಲೆ ಯತ್ನ, ಪೊಲೀಸ್ ಠಾಣೆಗೆ ಕಲ್ಲು ತೂರಾಟ, ಕನ್ನ ಕಳವು, ಜಾನುವಾರು ಕಳವು, ಜಾನುವಾರು ಹತ್ಯೆ ಹಾಗೂ ರೌಡಿಸಂಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಒಟ್ಟು 30 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಡಿಪಾರು ಆದೇಶದಂತೆ ಮೊಹಮ್ಮದ್ ದಾನೀಶ್ ಮದನಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ, ಕರಾಣಿ ಮುಸೀನ್ ಅವರನ್ನು ಬೀದರ್ ಜಿಲ್ಲೆಯ ಗಾಂಧಿಗಂಜ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಇಲಿಯಾಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ರೌಡಿಸಂ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರ ವಿರುದ್ಧ ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಹಾಗೂ ನಾಲ್ವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 14 ಮಂದಿಯ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.